ಶಿಲ್ಲಾಂಗ್: ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ್ದ ಇಂದೋರ್ ಮೂಲದ ದಂಪತಿ ನಾಪತ್ತೆ ಪ್ರಕರಣದಲ್ಲಿ(Indore Couple missing) ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ. ನಾಪತ್ತೆಯಾಗಿದ್ದ ರಾಜಾ ರಘುವಂಶಿ ಮೃತದೇಹ ಸಿಕ್ಕಿರುವ ಬೆನ್ನಲ್ಲೇ ಸೋಹ್ರಾದ ಮಾವ್ಕ್ಮಾ ರಸ್ತೆಯ ಬಳಿ ರಕ್ತದ ಕಲೆಗಳನ್ನು ಒಳಗೊಂಡಂತಹ ರೈನ್ ಕೋಟ್ ಪತ್ತೆಯಾಗಿದೆ. ಪತ್ತೆಯಾಗಿರುವ ರೈನ್ ಕೋಟ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೋಲಿಸರು ನಾವು “ಒದ್ದೆಯಾದ ರೈನ್ಕೋಟ್ ಪತ್ತೆಹಚ್ಚಿದ್ದೇವೆ. ಅದರ ಮೇಲೆ ಕೆಲವು ಕಲೆಗಳು ಕಂಡುಬಂದಿವೆ, ಆದರೆ ಅದು ರಕ್ತದ ಕಲೆ ಎಂಬುದು ಸದ್ಯದ ಮಟ್ಟಿಗೆ ಖಚಿತವಿಲ್ಲ. ಹಾಗಾಗಿ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಸ್ಪಷ್ಟವಾಗುತ್ತದೆ,” ಎಂದು ಈಸ್ಟ್ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ. ಪತ್ತೆಯಾದ ರೈನ್‌ಕೋಟ್ XXXL ಸೈಜ್‌ನಲ್ಲಿದ್ದು, ಅದು ಕಾಣೆಯಾಗಿರುವ ಸೋನಂ ಅವರದ್ದಾ ಎಂದು ಧೃಡಪಡಿಸಿಕೊಳ್ಳಲು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಡ್ರೋನ್ ಬಳಸಿ ಹುಡುಕಾಟ ನಡೆಸುತ್ತಿರುವ ಪೋಲಿಸರು
ಜೋಡಿ ಕಾಣೆಯಾದ ಸಮೀಪವಿರುವ ವೈ ಸವ್‌ಡಾಂಗ್ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹುಡುಕಾಟ ನಡೆಸಲು ಕಷ್ಟವಾಗುತ್ತಿದೆ. ಆದರೂ ಕೂಡ ಡ್ರೋನ್‌ಗಳನ್ನು ಬಳಸಿ ಹುಡುಕಾಟ ನಡೆಸಲು ಪ್ರಯತ್ನ ಮಾಡಿದ್ದೆವು. ಆದರೆ ಅದು ಕೂಡ ಅಸಾಧ್ಯವಾಯಿತು. ಇನ್ನು ಇದಾದ ನಂತರ NESAC ಯ ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡೆವು, ಆದರೆ ಹಾವಾಮಾನ ವೈಪರಿತ್ಯ ಕಾರಣ ಅದು ಕೂಡ ಕಾರ್ಯನಿರ್ವಹಿಸುವಲ್ಲಿ ವಿಫಲವಾಯಿತು ಎಂದು ಎಸ್‌ಪಿ ಸೈಯೆಮ್ ಹೇಳಿದರು. ಈ ಡ್ರೋನ್ ಸಹಾಯದಿಂದ ಸೋನಂ ರಘುವಂಶಿಯ ಪತಿಯಾದ ರಾಜಾ ರಘುವಂಶಿಯ ಶವವನ್ನು ಸೋಮವಾರ ವೈಸವ್‌ಡಾಂಗ್ ಕಣಿವೆಯಲ್ಲಿ ಪತ್ತೆಹಚ್ಚಲಾಯಿತು. ರಾಜಾ ರಘುವಂಶಿಯ ಶವದ ಜೊತೆಗೆ ಮಹಿಳೆಯ ಬಿಳಿ ಶರ್ಟ್, ಔಷಧಿ ಪಟ್ಟಿ, ಮೊಬೈಲ್ ಎಲ್ಸಿಡಿ ಭಾಗ ಮತ್ತು ಸ್ಮಾರ್ಟ್‌ವಾಚ್ ಸಹ ಪತ್ತೆಯಾಗಿವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Indore Couple Missing: ಹನಿಮೂನ್‌ಗೆ ತೆರಳಿದ್ದ ಜೋಡಿ ನಾಪತ್ತೆ ಕೇಸ್; 9 ದಿನಗಳ ನಂತರ ಪತಿ ಶವವಾಗಿ ಪತ್ತೆ- ಪತ್ನಿ ಇನ್ನೂ ಮಿಸ್ಸಿಂಗ್
ಘಟನೆಯ ಹಿನ್ನಲೆ:
ಈ ದಂಪತಿ ಹನಿಮೂನ್‌ಗೆ ಹೋಗಿ ಮೇ 22ರಂದು ಮಾವ್ಲಖಿಯಾಟ್ ಗ್ರಾಮಕ್ಕೆ ತೆರಳಿದ್ದರು ಮತ್ತು ನಂಗ್ರಿಯಟ್ ಎಂಬಲ್ಲಿ ಒಂದು ದಿನ ರಾತ್ರಿ ಉಳಿದುಕೊಂಡಿತ್ತು. ನಂತರ ಮೇ 24ರಂದು ಜೋಡಿ ಕಾಣೆಯಾದ ಹಿನ್ನಲೆ ಕುಟುಂಬಸ್ಥರ ದೂರಿನಾಧಾರದಲ್ಲಿ ಖಾಕಿ ಪಡೆ ಕಾರ್ಯಚರಣೆಗೆ ಇಳಿದಿತ್ತು. ಬಳಿಕ ಶಿಲ್ಲಾಂಗ್–ಸೋಹ್ರಾ ರಸ್ತೆಯಲ್ಲಿರುವ ಕಾಫಿ ಹೌಸ್ ಮುಂದೆ ಅವರ ಸ್ಕೂಟರ್ ಸಿಕ್ಕಿತ್ತು. ಕಾಣೆಯಾದ ಜೋಡಿಯನ್ನು ಪತ್ತೆ ಹಚ್ಚಲು ಖಾಕಿ ಪಡೆ ನಿರಂತವವಾಗಿ ಶೋಧ ನಡೆಸುತ್ತಿದೆ.
ಕಾರ್ಯಚರಣೆ ಪಡೆ:
ಎಸ್‌ಪಿ ಸೈಯೆಮ್ ಪ್ರಕಾರ, 50-60 ಜನ ಸಿಬ್ಬಂದಿ ಹುಡುಕಾಟದಲ್ಲಿ ತೊಡಗಿದ್ದಾರೆ. ಇವರಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡಗಳು, ವಿಶೇಷ ತನಿಖಾ ತಂಡ (SIT), ವಿಶೇಷ ಕಾರ್ಯಾಚರಣೆ ತಂಡ (SOT) ಮತ್ತು ಸ್ಥಳೀಯ ಸ್ವಯಂಸೇವಕರಿದ್ದಾರೆ.