Karunadu Studio

ಕರ್ನಾಟಕ

ಬೆಂಗಳೂರು ಕಾಲ್ತುಳಿಕ್ಕೆ ಡಿಕೆಶಿ ಕಾರಣ; ಅವರನ್ನು ಸಚಿವ ಸಂಪುಟದಿಂದ ಹೊರ ಹಾಕಿ: ಎಚ್‌ಡಿಕೆ ಆಗ್ರಹ – Kannada News | HDK said that the DKS reason for Bengaluru Stampede


ಹೊಸದಿಲ್ಲಿ: ʼʼಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ (Bengaluru Stampede) 11 ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣರಾದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕುʼʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಪುನರುಚ್ಚರಿಸಿದ್ದಾರೆ. ಅಲ್ಲದೆ ಡಿಸಿಎಂ ಮನುಷ್ಯತ್ವ ಇಲ್ಲದ ರಾಕ್ಷಸಿ ಪ್ರವೃತ್ತಿಯ ವ್ಯಕ್ತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲ್ತುಳಿತ ದುರಂತದ ಬಗ್ಗೆ ಹೊಸದಿಲ್ಲಿಯ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ʼʼಮುಖ್ಯಮಂತ್ರಿಗೆ ಧೈರ್ಯ ಇದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ಆಚೆ ಹಾಕಬೇಕುʼʼ ಎಂದು ತಿಳಿಸಿದ್ದಾರೆ.

ʼʼತನಗೆ ಪಿಆರ್ ಮಾಡುತ್ತಿರುವ ಕಂಪನಿಯೊಂದು ಬರೆದುಕೊಟ್ಟ ಸ್ಕ್ರಿಪ್ಟ್‌ನಂತೆ ಅವರು ಬುಧವಾರ ಇಡೀ ದಿನ ಡ್ರಾಮ ನಡೆಸಿದರು. ಇದು ಅಸೂಕ್ಷ್ಮತೆಯ ಪರಮಾವಧಿ. ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ವ್ಯಕ್ತಿ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ರೀತಿಯ ಮಾನವೀಯತೆಯ ಗುಣಗಳು ಇಲ್ಲ. ಸಾವಿನಲ್ಲಿಯೂ ಪ್ರಚಾರಕ್ಕೆ ಹಪಾಹಪಿಸಿದ ವ್ಯಕ್ತಿʼʼ ಎಂದು ಅವರು ಆರೋಪಿಸಿದ್ದಾರೆ.

ʼʼವಿಧಾನನೌಧ ಮೆಟ್ಟಿಲು ಮೇಲೆ ಇವರು ಕಾರ್ಯಕ್ರಮ ಮಾಡಿದ ಉದ್ದೇಶ ಏನು? ಇಡಿ ಸರ್ಕಾರ ಅದನ್ನು ಕುಟುಂಬ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿತ್ತು. ಅದು ಕೇವಲ ಡಿಸಿಎಂ ದಾದಾಗಿರಿಯ ಶೋ ಆಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹಲವರ ಜೀವ ಹೋಗಿದೆ ಎಂಬ ವಿಷಯ ಗೊತ್ತಾದ ಮೇಲೆಯೂ ಇವರು ಅಲ್ಲಿ ಕಾರ್ಯಕ್ರಮ ನಡೆಸಿದರುʼʼ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: DK Shivakumar: ಆರ್‌ಸಿಬಿ ವಿಜಯೋತ್ಸವದ ವೇಳೆ ಅಭಿಮಾನಿಗೆ ಹೊಡೆದ ಡಿಕೆಶಿ; ಕಿಡಿ ಕಾರಿದ ನೆಟ್ಟಿಗರು

ʼʼಈ ವ್ಯಕ್ತಿ ತೆವಲಿಗೆ ಅನೇಕ ಅಮಾಯಕರ ಪ್ರಾಣಗಳು ಹೋದವು. ಈತ ಒಬ್ಬ ರೌಡಿಯಂತೆ ವರ್ತಿಸಿದ್ದಾರೆ. ತನ್ನ ಶೋಕಿಗೆ ಇಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ. ಸರ್ಕಾರದ ಹೊಣೆಗೇಡಿತನ ಹಾಗೂ ಡಿಸಿಎಂ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಷ್ಟು ಜೀವಗಳನ್ನು ಬಲಿ ಕೊಟ್ಟರು. ಇದಕ್ಕೆ ಸರ್ಕಾರವೇ ಹೊಣೆ. ವಿಧಾನಸೌಧದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮಾಡಿಕೊಂಡಿದ್ದರು. ಈಗ ಕೇವಲ ತನಿಖೆಗೆ ಆದೇಶ ಕೊಟ್ಟು, ಮೃತರಿಗೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವಂತಿಲ್ಲʼʼ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ʼʼಡಿಸಿಎಂ ಡಿಕೆಶಿ ಕರ್ನಾಟಕದ ಸೂಪರ್ ಚೀಫ್ ಮಿನಿಸ್ಟರ್ ರೀತಿ ವರ್ತಿಸಿದ್ದಾರೆ. ಅವರೇ ದುರಂತಕ್ಕೆ ನೇರ ಹೊಣೆ. ಆರ್‌ಸಿಬಿ ಗೆಲುವಿನ ಕ್ರೆಡಿಟ್ ಪಡೆದುಕೊಳ್ಳಲು ಇಷ್ಟು ಮಾಡಿದ ಡಿಸಿಎಂ ಆಗಿರುವ ದುರಂತದ ಹೊಣೆಯನ್ನು ಹೊರಲೇಬೇಕು. ಅವರು ಇಡೀ ತಂಡವನ್ನೇ ಹೈಜಾಕ್ ಮಾಡಿದರು. ಪೊಲೀಸರನ್ನು ಹತ್ತಿರಕ್ಕೆ ಬರದಂತೆ ತಡೆದರುʼʼ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ʼʼವಿಧಾನಸೌಧದ ಮೆಟ್ಟಿಲು ಮೇಲೆ ನಡೆದ ಕಾರ್ಯಕ್ರಮದ ಮೇಲೆ ಬಂದಿದ್ದ ಜನರನ್ನು ವೇದಿಕೆಯ ಮೇಲೆ ಕತ್ತು ಹಿಡಿದು ತಳ್ಳುತ್ತಾರೆ. ಇಂಥ ವ್ಯಕ್ತಿಯನ್ನು ನಾವು ಮನುಷ್ಯ ಎಂದೂ ಕರೆಯಲು ಆಗುತ್ತದೆಯೇ?ʼʼ ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸರ ಮಾತು ಗಾಳಿಗೆ ತೂರಿ ಕಾರ್ಯಕ್ರಮ ಆಯೋಜನೆ

ʼʼಇವರೇ ಜನರಿಗೆ ಹೇಳಿಕೊಂಡು, ಇವರೇ ಜನರನ್ನು ಸೇರಿಸಿ, ಪೊಲೀಸರು ಎರಡು ಕಡೆ ಕಾರ್ಯಕ್ರಮ ಬೇಡ ಎಂದರೂ ಕೇಳದೆ ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ವಿಧಾನಸೌಧ ಮುಂದೆ ಇವರ ಮಕ್ಕಳು, ಮೊಮ್ಮಕ್ಕಳು, ಅಧಿಕಾರಿಗಳು, ಅವರ ಮಂದಿ ಮಾಗದರೂ ಸೇರಿದ್ದರು. ಇವರು ಶೋ ಮಾಡಲಿಕ್ಕೆ ಇವರು ಇಡೀ ಆರ್‌ಬಿಐ ಗೆಲುವನ್ನು ಬಳಕೆ ಮಾಡಿಕೊಂಡರು. ಆಟಗಾರರನ್ನು ಪಕ್ಕಕ್ಕೆ ತಳ್ಳಿ ಇವರೇ ಮಿಂಚಿದ್ದಾರೆʼʼ ಎಂದು ಅವರು ದೂರಿದ್ದಾರೆ.

ʼʼಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿಸಿದ್ದರು. ಮೊದಲೇ ಅಭಿಮಾನಿಗಳನ್ನು ಮೈದಾನದೊಳಕ್ಕೆ ಬಿತ್ತಿದ್ದಿದ್ದರೆ ಈ ಸಮಸ್ಯೆ ಸೃಷ್ಟಿ ಆಗುತ್ತಿರಲಿಲ್ಲ. ಅವರೇ ಮೈದಾನದ ಬಾಗಿಲು ಬಂದ್ ಮಾಡಲು ಹೇಳಿದ್ದರು. ಡಿಸಿಎಂ ತಮ್ಮ ವರ್ಚಸ್ಸು ವೃದ್ಧ ಮಾಡಿಕೊಳ್ಳಲು ಇವರು ಇಷ್ಟೆಲ್ಲಾ ಮಾಡಿದ್ದಾರೆ. ಬೇರೆ ಮಂತ್ರಿಗಳು ಇರಲಿಲ್ಲವೇ? ಕ್ರೀಡಾಮಂತ್ರಿ ಎಲ್ಲಿ ಹೋದರು? ಅವರಿಗೆ ಜವಾಬ್ದಾರಿ ಇರಲಿಲ್ಲವೇ?ʼʼ ಎಂದು ಅವರು ಪ್ರಶ್ನಿಸಿದ್ದಾರೆ.

ʼʼಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿರುವ ಲೋಪಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಿದೆ. ಅತ್ಯಂತ ದಾರುಣವಾದ ಸಂಗತಿ ಎಂದರೆ, ಕ್ರೀಡಾಂಗಣದ ಹೊರಗೆ ಮೃತದೇಹಗಳು ಬಿದ್ದಿದ್ದರೂ ಇವರು ಮೆರವಣಿಗೆಯಲ್ಲಿ ಮೈದಾನಕ್ಕೆ ತೆರಳಿ ಇವರೇ ಕಪ್ ಗೆದ್ದಂತೆ, ಇವರೇ ಆರ್‌ಸಿಬಿ ಕ್ಯಾಪ್ಟನ್ ಎನ್ನುವಂತೆ ಆಟಗಾರರ ಮುಂದೆ ಕಪ್‌ಗೆ ಮುತ್ತಿಡುತ್ತಾರೆʼʼ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನಿಖೆ ಕಣ್ಣೊರೆಸುವ ತಂತ್ರವಷ್ಟೇ

ʼʼಇವತ್ತು ಇವರಿಗೆ ಕಣ್ಣಲ್ಲಿ ನೀರು ಬಂದಿದೆ. ಘಟನೆ ನಡೆದ ಹದಿನಾರು ಗಂಟೆಗಳ ನಂತರ ಇವರಿಗೆ ಕಣ್ಣೀರು ಬಂದಿದೆ. ಇವರು ಎಂತಹ ಕಟುಕರು ಎನ್ನುವುದು ಇದರಿಂದ ಅರ್ಥವಾಗುತ್ತದೆ. ತನಿಖೆ ಎನ್ನುವುದು ಕೇವಲ ಜನರ ಕಣ್ಣೊರೆಸುವ ತಂತ್ರ ಅಷ್ಟೇ. ರಾಜಕೀಯದ ಪ್ರಶ್ನೆ ಇಲ್ಲ. ಈ ಮುಖ್ಯಮಂತ್ರಿಗೆ ನಾಡಿನ ಜನರ ಬಗ್ಗೆ ಗೌರವ ಇದ್ದರೆ, ಮೊದಲು ಈ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರಕ್ಕೆ ಹಾಕಬೇಕುʼʼ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಗೃಹ ಸಚಿವರಿಲ್ಲ

ʼʼಗೃಹ ಸಚಿವರು ಎನ್ನುವವರು ರಾಜ್ಯದಲ್ಲಿ ಇಲ್ಲವೇ ಇಲ್ಲ. ಕೂರು ಎಂದರೆ ಕೂರು, ಏಳು ಎಂದರೆ ಏಳುತ್ತಾರೆ. ಕೇವಲ ಡ್ರಿಲ್ ಮಾಡುವ ಹೊಮ್ ಮಿನಿಸ್ಟರ್ ರಾಜ್ಯದಲ್ಲಿ ಇದ್ದಾರೆ. ಅವರಿಗೆ ಧೈರ್ಯ ಇಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಲಹೆ ಧಿಕ್ಕರಿಸಿ ಸರ್ಕಾರ ನಡೆದುಕೊಂಡಿದೆʼʼ ಎಂದು ಅವರು ಹೇಳಿದ್ದಾರೆ.

ʼʼಒಬ್ಬ ಜಿಲ್ಲಾಧಿಕಾರಿ ಏನು ತನಿಖೆ ಮಾಡಲು ಸಾಧ್ಯ? ಅದರಿಂದ ಏನು ಉಪಯೋಗ? ಸರ್ಕಾರ ಹೇಳಿದಂತೆ ಅವರು ಬರೆದುಕೊಡುತ್ತಾರೆ. ಇವರಿಗೆ ಪರ್ಮನೆಂಟ್ ಆಗಿ ಒಬ್ಬರು ಇದ್ದಾರಲ್ಲ, ಅವರ ನೇತೃತ್ವದಲ್ಲಿಯೇ ಒಂದು ಆಯೋಗ ಮಾಡಬೇಕಿತ್ತು. ಏಕೆ ಮಾಡಲಿಲ್ಲವೋ ಗೊತ್ತಿಲ್ಲ ಎಂದ ಸಚಿವರು; ವಿಧಾನಸೌಧ ಬಳಿಯೇ ಇವರ ಬಂಧು ಬಳಗ ಹಾವಳಿ ಹೆಚ್ಚಾದಾಗ ಕ್ರಿಕೆಟ್ ಪ್ರೇಮಿಗಳ ಸಹನೆ ಕಟ್ಟೆಯೊಡೆದಿದೆ. ಅಲ್ಲಿಯೇ ಜನ ಕಲ್ಲು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರುʼʼ ಎಂದಿದ್ದಾರೆ.

ʼʼನಾಲ್ಕು ಜನ ಸತ್ತ ಮೇಲೆಯೂ ಡಿಸಿಎಂ ಎನ್ನುವ ಈ ವ್ಯಕ್ತಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೆ ಮುತ್ತಿಟ್ಟರು. ಅದು ಈ ವ್ಯಕ್ತಿಯ ನಡವಳಿಕೆ ತೋರಿಸುತ್ತದೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »