ಹೈದರಾಬಾದ್: ಒಂದೆರೆಡು ಸಿನಿಮಾ ಸಕ್ಸಸ್ ಬಳಿಕ ಸಿನಿ ತಾರೆಯರು ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಾಮಾನ್ಯ. ಅಂತೆಯೆ ಸೆಲೆಬ್ರಿಟಿಗಳ ವೇತನ ಹೆಚ್ಚಾದಂತೆ ಸಿನಿಮಾ ಮೇಲೆ ಹೂಡಿಕೆ ಮಾಡುವ ಬಂಡವಾಳ ಕೂಡ ನಿರೀಕ್ಷೆ ಮೀರಿ ಹೆಚ್ಚಾಗುತ್ತದೆ. ಇತ್ತೀಚೆಗಂತೂ ಸಿನಿಮಾಗಳು ಉದ್ಯಮ ಮಟ್ಟಕ್ಕೆ ಬೆಳೆಯುತ್ತಿದ್ದು ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿ ಬಿಡುಗಡೆ ಮಾಡುವ ಟ್ರೆಂಡಿಂಗ್ ಆರಂಭ ಆಗಿದೆ. ಇಂತಹ ಸಿನಿಮಾ ಗಳೆಲ್ಲವೂ ಜನರಿಗೆ ಇಷ್ಟವಾಗಬೇಕೆಂದಿಲ್ಲ. ಕೋಟಿ ಕೋಟಿ ರೂ. ಬಂಡವಾಳ ಹಾಕಿದ ಮೇಲೂ ಸಿನಿಮಾಗಳು ಫ್ಯಾಪ್ ಆಗುತ್ತವೆ. ಇಲ್ಲೊಬ್ಬ ಸ್ಟಾರ್ ನಟ ತನ್ನ ಸಿನಿಮಾ ಫ್ಲಾಪ್ ಆಗಿದ್ದಕ್ಕೆ ನಿರ್ಮಾಪಕರಿಗೆ ಹಣವನ್ನೇ ಮರಳಿಸಿದ್ದಾರೆ ಮಾದರಿಯಾಗಿದ್ದಾರೆ.
ತೆಲುಗಿನ ಜನಪ್ರಿಯ ನಟರಲ್ಲಿ ಒಬ್ಬರಾದ ಸಿದ್ದು ಜೊನ್ನಲಗಡ್ಡ (Siddhu Jonnalagadda) ಅವರ ಅಭಿನಯದ ಅನೇಕ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿದೆ. ʼಟಿಲ್ಲುʼ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಇದಾದ ಮೇಲೆ ಕೂಡ ಕೆಲ ಸಿನಿಮಾಗಳು ಸಿದ್ದು ಜೊನ್ನಲಗಡ್ಡ ಅವರಿಗೆ ಫೇಮ್ ತಂದುಕೊಟ್ಟಿವೆ. ಹೀಗಾಗಿ ಅವರು ತಮ್ಮ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ʼಜಾಕ್ʼ ಸಿನಿಮಾದಲ್ಲಿ ಅಭಿನಯಿಸಲು ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆ ಇಟ್ಟಿದ್ದರು. ಆದರೆ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲಲು ವಿಫಲವಾಗಿ ನಿರ್ಮಾಪಕರಿಗೆ ಸಂಕಷ್ಟ ತಂದೊಡ್ಡಿದೆ
ʼಜಾಕ್ʼ ತೆಲುಗು ಚಿತ್ರ ಎಪ್ರಿಲ್ 10 ರಂದು ಬಿಡುಗಡೆ ಆಗಿತ್ತು. ಆದರೆ ಹಿಟ್ ಆಗಲಿಲ್ಲ. ಈ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ರಾ ಏಜೆಂಟ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ನಟಿ ವೈಷ್ಣವಿ ಚೈತನ್ಯ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಬಿವಿಎಸ್ಎನ್ ಪ್ರಸಾದ್ ಈ ಸಿನಿಮಾಕ್ಕೆ ಸುಮಾರು 30 ಕೋಟಿ ರೂ. ಬಂಡವಾಳ ಹೂಡಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 10 ಕೋಟಿ ರೂಪಾಯಿಯಷ್ಟನ್ನು ಮಾತ್ರವೇ ಗಳಿಸಿತ್ತು.
ಸಿನಿಮಾಕ್ಕಾಗಿ ಸಿದ್ದು ಪಡೆದಿದ್ದ ಸಂಭಾವನೆಯಲ್ಲಿ 4.75 ಕೋಟಿ ರೂಪಾಯಿ ಮರಳಿಸಿದ್ದಾರೆ. ನಿರ್ಮಾಪಕರಿಗೆ ಆಗಿರುವ ಭಾರಿ ನಷ್ಟವನ್ನು ತುಂಬಿಕೊಡುವ ದೃಷ್ಟಿಯಿಂದಾಗಿ ನಟ ಸಿದ್ದು ಜೊನ್ನಲಗಡ್ಡ ಈ ರೀತಿಯಾಗಿ ಸಂಭಾವನೆಯ ಅರ್ಧಾಂಶ ನಿರ್ಮಾಪಕ ಬಿವಿಎಸ್ಎನ್ ಪ್ರಸಾದ್ ಅವರಿಗೆ ಹಿಂದಿರುಗಿಸಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Thug Life Movie: ಕಮಲ್ ಹಾಸನ್ ನಟನೆಯ ʻಥಗ್ ಲೈಫ್ʼ ಫ್ಲಾಪ್? ಮಣಿರತ್ನಂ ಮ್ಯಾಜಿಕ್ ಮಾಯ ಆಗಿದ್ಯಾ?
ನಟ ಸಿದ್ದು ಅವರ ಈ ನಿರ್ಣಯ ಸಿನಿ ಪ್ರಿಯರ ಮನಗೆದ್ದಿದೆ. ಸದ್ಯ ಇವರು ನಿರ್ಮಾಪಕ ನೀರಜಾ ಕೋನಾ ನಿರ್ದೇಶನದ ʼತೆಲುಸು ಕದಾʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಾಯಕಿಯಾಗಿ ಕನ್ನಡತಿ ಶ್ರೀನಿಧಿ ಶೇಟ್ಟಿ ಅಭಿನಯಿಸುತ್ತಿದ್ದಾರೆ. ಇದರ ಜತೆಗೆ ʼಟಿಲ್ಲುʼ ಕ್ಯೂಬ್ ಸಿನಿಮಾದಲ್ಲಿ ಸಿದ್ದು ನಟಿಸುತ್ತಿದ್ದಾರೆ. ʼತೆಲುಸು ಕದಾʼ ಅಕ್ಟೋಬರ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.