Karunadu Studio

ಕರ್ನಾಟಕ

Pralhad Joshi: ಡಿ.ಕೆ.ಶಿವಕುಮಾರ್‌ ರಾಜೀನಾಮೆಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಲಿ: ಪ್ರಲ್ಹಾದ್‌ ಜೋಶಿ ಆಗ್ರಹ – Kannada News | Pralhad Joshi Union minister Pralhad Joshi latest statement in Mysuru


ಮೈಸೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಘಟಿಸಿದ ದುರಂತವನ್ನು ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿ, ಡಿಸಿಎಂ ಡಿಕೆ ಶಿವಕುಮಾರ್‌ ರಾಜೀನಾಮೆಗೆ ಸೂಚನೆ ನೀಡಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಒಂದು ಕ್ಷಣವೂ ಕಾಯದೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಅವರೇ ಇದರ ನೈತಿಕೆ ಹೊಣೆ ಹೊರಬೇಕು ಎಂದು ತಿಳಿಸಿದ್ದಾರೆ.

ವಿಧಾನಸೌಧ ಮುಂಭಾಗ ಕಾರ್ಯಕ್ರಮ ನಡೆಯುತ್ತಿರುವಾಗಲೇ ʼಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಮೂವರ ಸಾವುʼ ಸುದ್ದಿ ಹರಡಿತ್ತು. ಹಾಗಿದ್ದರೂ ಡಿಸಿಎಂ ಕ್ರೀಡಾಂಗಣಕ್ಕೆ ತೆರಳಿ ಸಂಭ್ರಮಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಲ್ಲವೇ? ಎಂದು ಆರೋಪಿಸಿದರು. ಇಷ್ಟು ದೊಡ್ಡ ದುರಂತ ಘಟಿಸಿದರೂ ತಕ್ಷಣಕ್ಕೆ ಒಂದೇ ಒಂದು ಎಫ್‌ಐಆರ್‌ ಹಾಕದ ಸರ್ಕಾರ, ಹೈಕೋರ್ಟ್‌ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುತ್ತಲೇ ಪೊಲೀಸ್‌ ಅಧಿಕಾರಿಗಳನ್ನು ಹೊಣೆಯಾಗಿಸುವ ರೀತಿ ಅಮಾನತು ಮಾಡಿದ್ದೀರಿ. ಹಾಗಾದರೆ, ಡಿ.ಕೆ. ಶಿವಕುಮಾರ್‌ ಅವರನ್ನೂ ಡಿಸಿಎಂ ಸ್ಥಾನದಿಂದ ತೆಗೆದುಹಾಕಿ ವಿಚಾರಣೆಗೆ ಒಳಪಡಿಸುತ್ತೀರಾ? ಎಂದು ಪ್ರಶ್ನಿಸಿದರು.

ಸಿಎಂ ಅದ್ಯಾವಾಗ ನೈತಿಕ ಹೊಣೆ ಹೊತ್ತಿದ್ದಾರೆ?

ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲೂ ಆಯುಕ್ತ, ಅಧಿಕಾರಿಗಳನ್ನು ಗುರಿ ಮಾಡಿದರು. ವಾಲ್ಮೀಕಿ ಹಗರಣದಲ್ಲೂ ಅಷ್ಟೇ. ಈಗ ಈ ದುರಂತದಲ್ಲೂ ಅದೇ ವರ್ತನೆ ತೋರಿದ್ದಾರೆ. ತಮ್ಮ ರಾಜಕೀಯ ಪ್ರತಿಷ್ಠೆಯನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು.

ಯಾರನ್ನು ರಕ್ಷಿಸಲು ಪೊಲೀಸರ ಅಮಾನತು?

ಹೈಕೋರ್ಟ್‌ ಪ್ರಕರಣ ದಾಖಲಿಸಿಕೊಂಡ ಬಳಿಕ ಆರ್‌ಸಿಬಿ ದುರ್ಘಟನೆ ತನಿಖೆಗೆ ಸಿಎಂ ಬುದ್ಧಿ ಇಲ್ಲದವರಂತೆ ನಡೆದುಕೊಂಡಿದ್ದಾರೆ. ತರಾತುರಿಯಲ್ಲಿ ನಿವೃತ್ತ ನ್ಯಾಯಾಧೀಶರ ಏಕಸದಸ್ಯ ಆಯೋಗ ನೇಮಿಸಿದ್ದಾರೆ. ಪೊಲೀಸರನ್ನು ಅಮಾನತ್ತು ಮಾಡಿದ್ದಾರೆ. ಇದು ಯಾರನ್ನು ರಕ್ಷಿಸಲು? ವಾಸ್ತವವಾಗಿ ಹೈಕೋರ್ಟ್‌ ಸಮ್ಮತಿಸುವ ನ್ಯಾಯಾಧೀಶರನ್ನು ತನಿಖೆಗೆ ನೇಮಿಸಬೇಕು ಎಂದು ಹೇಳಿದರು.

ಹೈಕೋರ್ಟ್‌ ಸುಪರ್ದಿಯಲ್ಲೇ ವಿಚಾರಣೆ ಆಗಬೇಕು

ಈ ದುರಂತ ಈಗ ಹೈಕೋರ್ಟ್‌ ಅಂಗಳದಲ್ಲಿದೆ. ಹಾಗಾಗಿ ಹೈಕೋರ್ಟ್‌ ಮಾನಿಟರಿಯಲ್ಲೇ ತನಿಖೆಯಾಗಬೇಕು. ಹೈಕೋರ್ಟ್‌ ಸುಪರ್ದಿಯಲ್ಲೇ ವಿಚಾರಣೆ ಆಗಬೇಕು. ಹೈಕೋರ್ಟ್‌ ನ್ಯಾಯಾಧೀಶರನ್ನೇ ನೇಮಿಸಬೇಕು ಎಂದು ಪ್ರಲ್ಹಾದ್‌ ಜೋಶಿ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಆರ್‌ಸಿಬಿ ತಂಡ ಮುಂದಾಗಿರಲಿಲ್ಲ. ಅಲ್ಲದೇ, ಪೊಲೀಸ್‌ ಇಲಾಖೆ ಸಹ ಅನುಮತಿ ಕೊಡಲು ಸಿದ್ಧವಿರಲಿಲ್ಲ. ಹಾಗಿದ್ದರೂ ಸರ್ಕಾರವೇ ಒತ್ತಡ ಹಾಕಿದೆ. ʼಎರೆದುಕೊಳ್ಳುವವರ ಬುಡಕ್ಕೆ ಬಗ್ಗಿದರುʼ ಎನ್ನುವಂತೆ ಆರ್‌ಸಿಬಿ ಟ್ರೋಫಿ ಗೆದ್ದ ವಿಜಯೋತ್ಸವದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರತಿಷ್ಠೆ ಮೆರೆಯಲು, ಕ್ರೆಡಿಟ್‌ ತೆಗೆದುಕೊಳ್ಳಲು ಹೋಗಿದೆ. ಅದೂ ಯಾವೊಂದೂ ಪೂರ್ವ ತಯಾರಿ ಇಲ್ಲದೇ ಎಂದು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ಆರ್‌ಸಿಬಿ ತಂಡಕ್ಕೆ ವಿಮಾನ; ತನಿಖೆಯಾಗಲಿ

ಆರ್‌ಸಿಬಿ ತಂಡವನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ವಿಮಾನ ಕಳಿಸಿ ಕೊಟ್ಟವರು ಯಾರು? ಸರ್ಕಾರದಲ್ಲಿ ಇರುವವರೇ ವಿಮಾನ ಬುಕ್ ಮಾಡಿದಂತಿದೆ ಎಂದು ಆರೋಪಿಸಿದ ಅವರು, ಈ ಕುರಿತು ತನಿಖೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲೆತ್ನಿಸದೆ ನೈತಿಕ ಹೊಣೆ ಹೊರಬೇಕು. ಕೂಡಲೇ, ದಾದಾಗಿರಿ ಎಂಬಂತೆ ವರ್ತಿಸುವ ಡಿಸಿಎಂ ಡಿಕೆ ಶಿವಕುಮಾರ್‌ ರಾಜೀನಾಮೆ ಪಡೆಯಬೇಕು ಎಂದು ಜೋಶಿ ಆಗ್ರಹಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನ ಕಾಲ್ತುಳಿಕ್ಕೆ ಬಲಿಯಾಗಿದ್ದು ಗೊತ್ತಾದರೂ ವಿಧಾನಸೌಧದೆದುರು ಡಿಸಿಎಂ, ಸಚಿವರು, ಅಧಿಕಾರಿಗಳು ಕುಟುಂಬ ಸಮೇತ ಆರ್‌ಸಿಬಿ ಆಟಗಾರರೊಂದಿಗೆ ಸೆಲ್ಫಿಯಲ್ಲಿ ಮುಳುಗಿದರು. ಸಂಜೆ 5 ಗಂಟೆವರೆಗೂ ಸಂಭ್ರಮಿಸಿದ್ದಾರೆ. ಈ ಸರ್ಕಾರಕ್ಕೇನಾದರೂ ಮಾನವೀಯತೆ, ಮನುಷ್ಯತ್ವ ಇದೆಯೇ? ಜನರ ಬಗ್ಗೆ ಕಳಕಳಿ ಇದೆಯೇ? ಎಂದು ತರಾಟೆಗೆ ತೆಗೆದುಕೊಂಡರು.

ಟ್ವೀಟ್‌ ಕರೆ ಕೊಟ್ಟವರು ಯಾರು?

ವಿಧಾನಸೌಧ ಮುಂಭಾಗ ಭವ್ಯ ಸಂಭ್ರಮಾಚರಣೆಗೆ ಸಂಜೆ 4 ಗಂಟೆಗೆ ಬನ್ನಿ ಎಂದು ಟ್ವೀಟ್‌ ಕರೆ ಕೊಟ್ಟಿದ್ದು ತಾವೇ ಅಲ್ಲವೇ? ಹಾಗಾಗಿ ಅಷ್ಟು ಜನ ಬಂದಿದ್ದಾರೆ. ಇನ್ನು ವಿಮಾನ ನಿಲ್ದಾಣದಲ್ಲಿ ಆರ್‌ಸಿಬಿ ಆಟಗಾರರನ್ನು ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ ಹೋಗಿ ಸ್ವಾಗತಿಸಿದ್ದಾರೆ. ಸಾಲದ್ದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ತೆರಳಿದ್ದಾರೆ. ಪೊಲೀಸ್‌ ಕಮಿಷನರ್‌ ಅನುಮತಿ ಕೊಡದಿದ್ದರೂ ಡಿಸಿಎಂ ಹೇಗೆ ಹೋದರು? ಡಿಸಿಎಂ ತಮ್ಮನ್ನೇನು ಕ್ರಿಕೆಟ್‌ ಕೋಚ್‌ ಅಂದುಕೊಂಡಿದ್ದಾರಾ ಹೇಗೆ? ಎಂದು ಪ್ರಲ್ಹಾದ್‌ ಜೋಶಿ ತರಾಟೆಗೆ ತೆಗೆದುಕೊಂಡರು.

ಈ ಸುದ್ದಿಯನ್ನೂ ಓದಿ | Bengaluru Stampede: ಬೆಂಗಳೂರು ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಎಚ್‌ಡಿಕೆ ವಾಗ್ದಾಳಿ

ರಾಹುಲ್‌ ಗಾಂಧಿ ಸಹ ಜವಾಬ್ದಾರಿ

ರಾಹುಲ್‌ ಗಾಂಧಿಯೂ ಇದಕ್ಕೆ ಜವಾಬ್ದಾರರಾಗುತ್ತಾರೆ. ಅವರಿಗೆ ನೈತಿಕತೆ ಇದ್ದರೆ, ಕಾಂಗ್ರೆಸ್‌ ಹೈಕಮಾಂಡ್‌ಗೆ ಕಮಾಂಡ್‌ ಅನ್ನೋದು ಇದ್ದರೆ ಮೊದಲು ಡಿಸಿಎಂ ಡಿಕೆಶಿ ರಾಜೀನಾಮೆ ಪಡೆಯಲಿ ಮತ್ತು ಸಿಎಂರನ್ನು ಹೊಣೆಯಾಗಿಸಿ ಕ್ರಮ ಕೈಗೊಳ್ಳಲಿ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »