Karunadu Studio

ಕರ್ನಾಟಕ

Bengaluru Stampede: ಫೈನಲ್ ಪಂದ್ಯ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ ಅನುಮತಿ ಕೇಳಿದ್ದ ಆರ್‌ಸಿಬಿ! – Kannada News | RCB had sought permission for the victory celebration even before winning the final match


ಬೆಂಗಳೂರು: ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿ ಕಡೆಯವರು ವಿಜಯೋತ್ಸವ ಮಾಡುತ್ತೇವೆ ಎಂದು ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಗೆಲ್ಲುತ್ತೇವೆ ಎಂದು ಆರ್‌ಸಿಬಿ ತಂಡಕ್ಕೆ ಕನಸು ಬಿದ್ದಿತ್ತಾ ಎಂದು ಪ್ರಶ್ನಿಸಿದ್ದಾರೆ. ಕಾಲ್ತುಳಿತ ಪ್ರಕರಣದ ( Bengaluru Stampede) ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಫೈನಲ್ಸ್ ಪಂದ್ಯ ಆರಂಭವಾಗಿದ್ದು ಏಳೂವರೆ ಗಂಟೆಗೆ. ಇಲ್ಲಿ ನೋಡಿದರೆ ಆರು ಗಂಟೆಗೆಲ್ಲ ವಿಜಯೋತ್ಸವ ಮಾಡುತ್ತೇವೆ, ನಮಗೆ ಅನುಮತಿ ಕೊಡಿ ಪೊಲೀಸರಿಗೆ ಆರ್‌ಸಿಬಿ ಅವರು ಅರ್ಜಿ ಕೊಡುತ್ತಾರೆ! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಅರ್ಜಿ ಹಾಕಿದ್ದಾರೆ. ಇದು ಹೇಗೆ ಸಾಧ್ಯ? ಪದ್ಯ ಆರಂಭಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿಗೆ ತಮ್ಮ ತಂಡ ಗೆಲುತ್ತದೆ ಎಂದು ಹೇಗೆ ಗೊತ್ತು? ಎಂದು ಪ್ರಶೈಸಿದರು.

ನಾವು ಗೆಲ್ಲುತ್ತೇವೆ ಎಂದು ಇವರಿಗೇನು ಕನಸು ಬಿದ್ದಿತ್ತಾ? ಫೈನಲ್ ಗೆಲ್ತೀವಿ ಅಂತ ಮೊದಲೇ ಗೊತ್ತಿತ್ತಾ? ಇನ್ನು ಫೈನಲ್ ಮ್ಯಾಚ್ ಶುರುನೇ ಆಗದೇ ಇವರು ಅರ್ಜಿ ಕೊಡುತ್ತಾರೆ. ಇನ್ನೊಂದು ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPR) ಗೆ ಕೊಟ್ಟು ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಮಾಡೋಕೆ ಅವಕಾಶ ಕೊಡಿ ಎಂದು ಕೇಳುತ್ತಾರೆ? ಇದು ಹೇಗೆ ಸಾಧ್ಯ ಎಂದು ಅವರು ಕೇಳಿದರು.

ಈ ಎಲ್ಲಾ ಪತ್ರಗಳನ್ನು ಯಾರು ಬರೆದಿದ್ದರು? ಪಂದ್ಯ ಮುಗಿದ ಮರುದಿನ ಬೆಳಗ್ಗೆ 7.30ಕ್ಕೆ ಪೊಲೀಸ್ ಕಮೀಷನರ್ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

HDK2505

ಅಸೂಕ್ಷ್ಮ ಸರ್ಕಾರಕ್ಕೆ ಕೊನೆಗೂ ಜ್ಞಾನೋದಯವಾಗಿದೆ:

ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದ ರಾಜು ಅವರನ್ನು ಕಿತ್ತು ಹಾಕಿರುವುದು ಒಳ್ಳೆಯ ಕ್ರಮ ಎಂದು ಹೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಈ ಅಸೂಕ್ಷ್ಮ ಸರ್ಕಾರಕ್ಕೆ ಜ್ಞಾನೋದಯವಾಗಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಸರಿಯಲ್ಲ. ಈ ಅಮಾನತು ಅವಶ್ಯಕತೆ ಇರಲಿಲ್ಲ. ಈ ರೀತಿ ಸರ್ಕಾರ ನಡೆದುಕೊಂಡರೆ ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡಿರುವುದು ಸರಿಯಲ್ಲ. ಸರ್ಕಾರ ಸೂಕ್ಷ್ಮವಾಗಿ ಯೋಚನೆ ಮಾಡಬೇಕಿತ್ತು. ಈ ಘಟನೆಯ ಮೂಲ ಕಾರಣಗಳೇ ಬೇರೆ. ಆ ಕಾರಣಗಳನ್ನು ಸರ್ಕಾರ ಮರೆಮಾಚುತ್ತದೆ ಎಂದು ಅವರು ಕಟುವಾಗಿ ಟೀಕಿಸಿದರು.

ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಸಿಎಂ, ಡಿಸಿಎಂ ಹೇಳಿಕೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಹೆಣದ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ನಮಗೆ ಇಲ್ಲ. ಇದ್ದ ವಿಷಯವನ್ನೇ ನಾನು ಹೇಳಿದ್ದೇನೆ. ನನ್ನ ಮಿತ್ರ ಪಕ್ಷವೂ ಹೇಳಿದೆ. ನಡೆದಿರುವುದನ್ನು ಹೇಳಿದ್ದೇವೆ. ಇದರಲ್ಲಿ ರಾಜಕೀಯ ಏನಿದೆ? ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದ ಮೇಲೆಯೂ ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೆ ಮುತ್ತಿಕ್ಕಿ ಶೋ ಮಾಡಿದ್ದು ಯಾರು? ಜನರೇ ಎಲ್ಲವನ್ನೂ ನೋಡಿದ್ದಾರೆ. ಮಾಧ್ಯಮಗಳು ಎಲ್ಲವನ್ನೂ ಪ್ರಸಾರ ಮಾಡಿವೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ, ಡಿಸಿಎಂ, ಗೃಹ ಸಚಿವರೇ ಹೊಣೆ ಹೊರಬೇಕು:

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರೇ ತೆಗೆದುಕೊಳ್ಳಬೇಕು. ಈ ಮೂವರದು ಕೂಡ ತಪ್ಪಿದೆ. ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರಾತುರವಾಗಿ ಸನ್ಮಾನ ಮಾಡೋದು ಏನಿತ್ತು? ಹೋಗಲಿ, ಸನ್ಮಾನವನ್ನಾದರೂ ಸರಿಯಾಗಿ ‌ಮಾಡಿದ್ರಾ? ಕಾಟಾಚಾರಕ್ಕೆ ಮಾಡಿದರು. ಆಟಗಾರರನ್ನು ಕೂಡ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇವರು ಕೊಟ್ಟ ಶಾಲು, ಟೋಪಿ ಎಲ್ಲವನ್ನು ಅವರು ತಗೊಂಡು ಹೋದರೋ ಬಿಡಾಡಿ ಹೋದರೋ ಗೊತ್ತಿಲ್ಲ. ಈ ಪುರುಷಾರ್ಥಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಈಗಿನ ಕಾಲದಲ್ಲಿ ನಾವು ರಾಜಕಾರಣಿಗಳು ಭಂಡರು ಅಂತ ತೋರಿಸಿಕೊಂಡಿದ್ದೇವೆ. ಅವರಿಂದ ರಾಜೀನಾಮೆ ನಿರೀಕ್ಷೆ ಮಾಡೋಕೆ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಒತ್ತಾಯ ಮಾಡಿದ್ದೇವೆ. ಹೆಣದ ಮೇಲೆ ರಾಜಕೀಯ ಮಾಡೋ ದುರ್ಗತಿ ನಮಗೆ ಬಂದಿಲ್ಲ. ಅದು ಬರೋದು ಇಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಎಲ್ಲರ ಕಾಲದಲ್ಲಿ ಆಗಿದ್ದು ಮಾತಾಡ್ತೀನಿ ಎಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಲೇವಡಿ ಮಾಡಿದ ಸಚಿವರು, ಸದನದಲ್ಲಿ ಅವರು ಏನು ಮಾತನಾಡುತ್ತಾರೆ? ತಮ್ಮ ಬಳಿ ಏನು ದಾಖಲೆ ಇದೆ ಎನ್ನುವುದನ್ನು ಇಡಲಿ. ಹಿಂದೆ ನಡೆದ ಕಲಾಪಗಳಲ್ಲಿ ಅವರು ಏನೇನು ಮಾಡಿದ್ದರು ಎಂಬುದು ಗೊತ್ತಿದೆ. ಏನ್ ಸಾಧನೆ ಮಾಡಿದ್ದೀನಿ ಅಂತ ಸದನದಲ್ಲಿ ‌ಮಾತಾಡ್ತಾರೆ. ಈ ಘಟನೆ ಬಿಡಿ ಎರಡು ವರ್ಷಗಳಲ್ಲಿ ಇವರ ಸಾಧನೆ ಏನು? ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಇವರ ಕೊಡುಗೆ ಏನು? ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ದುರಂತದಲ್ಲಿ ಮೃತಪಟ್ಟವರಿಗೆ ಕಡಿಮೆ ಮೊತ್ತದ ಪರಿಹಾರ ನೀಡಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜೀವ ಕಳೆದುಕೊಂಡವರು ವಾಪಸ್ ಬರುವುದಿಲ್ಲ. ದುಡ್ಡಿನ ಮೇಲೆ ಜೀವಕ್ಕೆ ಬೆಲೆ ಕಟ್ಟಲು ಆಗಲ್ಲ. ಸರ್ಕಾರ ಅನೇಕ ಸಮಯದಲ್ಲಿ ವಿಶೇಷ ಪ್ರಕರಣ ಅಂತ ಅನೇಕ ಬಾರಿ ಪರಿಹಾರ ಕೊಟ್ಟಿದೆ. ಇದು ಸರ್ಕಾರವೇ ಎಸಗಿದ ತಪ್ಪು. ಕುಟುಂಬಗಳಿಗೆ ಆಗಿರುವ ದುಃಖವನ್ನು ನೀಗಿಸಲು ಸಾಧ್ಯವಿಲ್ಲ. ಇದನ್ನು ವಿಶೇಷ ‌ಪ್ರಕರಣ ಎಂದು ಸರ್ಕಾರ ಹೆಚ್ಚುನರಿಹರ ನೀಡಬೇಕು ಎಂದು ಒತ್ತಾಯಿಸಿದರು.

ಡಾ. ರಾಜ್ ಅವರ ನಿಧನದ ದಿನಕ್ಕೆ ಹೋಲಿಸುವುದು ಸರಿಯಲ್ಲ

ವರನಟ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಏನೇನು ನಡೆಯಿತೋ ಎನ್ನುವುದು ಈಗಾಗಲೇ ಹೇಳಿದ್ದೇನೆ. ಈ ಸರ್ಕಾರ ಅಣ್ಣಾವ್ರ ನಿಧನದ ವಿಷಯ ಇಟ್ಟುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ರಕ್ಷಣೆ ಪಡೆಯೋದು ಬೇಡ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru Stampede: ಬೆಂಗಳೂರು ಕಾಲ್ತುಳಿತ; ನೈತಿಕ ಹೊಣೆ ಹೊತ್ತು ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ

ರಾಜ್ ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ಅಶಾಂತಿ ಉಂಟು ಮಾಡಲು ನಿರ್ದಿಷ್ಟವಾಗಿ ಕೆಲವರು ಪ್ರಯತ್ನಪಟ್ಟರು. ಸೀಮೆಎಣ್ಣೆ, ಪೆಟ್ರೋಲ್ ತಂದು ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ವರನಟರ ಅಂತಿಮಯಾತ್ರೆ, ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡಿದರು. ಆಗ ಗೋಲಿಬಾರ್ ಆಯಿತು. ಇಬ್ಬರು ಸಾವನ್ನಪ್ಪಿದರು. ಅದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಆ ಘಟನೆಗೂ ಕಾಲ್ತುಳಿತಕ್ಕೆ ಹೋಲಿಕೆ ಮಾಡಬಾರದು ಎಂದು ಅವರು ಹೇಳಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »