ಚಿಕ್ಕಬಳ್ಳಾಪುರ: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಮರು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ನಗರ, ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಈದ್ಗಾ ಮೈದಾನಗಳಿಗೆ ತೆರಳಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದಲ್ಲಿ ಶುಕ್ರವಾರ ಸಂಜೆಯಿಂದಲೇ ಬಕ್ರೀದ್ ಹಬ್ಬ ಆಚರಣೆಗೆ ವ್ಯಾಪಕ ಸಿದ್ಧತೆ ನಡೆಸಿ ಕೊಂಡಿದ್ದ ಮುಸ್ಲಿಂ ಬಾಂಧವರು ಶನಿವಾರ ಬೆಳಗ್ಗೆ ಸ್ನಾನಾದಿ ವಿಧಿವಿಧಾನಗಳನ್ನು ಪೂರೈಸಿ, ಶ್ವೇತವಸ್ತ್ರಧಾರಿಗಳಾಗಿ ತಮ್ಮ ತಮ್ಮ ಪ್ರದೇಶದ ಸಮೀಪವಿರುವ ಮಸೀದಿ,ಈದ್ಗಾ ಮೈದಾನಗಳಿಗೆ ತೆರಳಿ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾದರು.
ಇದನ್ನೂ ಓದಿ: Tumkur (Chikkanayakanahalli) News: ನಿರಂತರ ಸಭೆಗಳಿಂದ ಅಧಿಕಾರಿಗಳು ಹೈರಾಣ, ಆಡಳಿತಕ್ಕೆ ಹಿನ್ನಡೆಯ ಆತಂಕ !
ಹಬ್ಬದ ಪ್ರಯುಕ್ತ ನಗರದಲ್ಲಿ ಮುಸ್ಲಿಂ ಬಾಂಧವರು ನಗರದ ಮಸ್ಜಿದೆ ಖುರ್ದ್ ಬಳಿ ಜಮಾಯಿಸಿ, ದೇವರ ನಾಮ ಸ್ಮರಣೆ ಮಾಡಿ, ಬಳಿಕ ಮೆರವಣಿಗೆ ಸಾಗಿದ ನೂರಾರು ಮುಸ್ಲಿಂ ಬಾಂಧವರು ಬಜಾರ್ ರಸ್ತೆ, ಭುವನೇಶ್ವರಿ ವೃತ್ತ,ಗಂಗಮ್ಮ ಗುಡಿ ರಸ್ತೆ ಹಾಗೂ ಎಂ.ಜಿ.ರಸ್ತೆ ಮಾರ್ಗವಾಗಿ ಸಾಗಿ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದ ಬಳಿ ಸೇರಿದರು. ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಮೀಪದ ಸ್ಮಶಾನಕ್ಕೆ ತೆರಳಿ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು. ಹೊಸ ಬಟ್ಟೆ ಧರಿಸಿ ಚಿಕ್ಕ ಮಕ್ಕಳು ಸೇರಿ ಹಿರಿಯರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಇದಕ್ಕೂ ಮುನ್ನ ವಿಶೇಷ ಉಪನ್ಯಾಸ ನೀಡಿದ ಧರ್ಮಗುರು ಮೌಲಾನಾ ಅಸ್ಜದ್ ,ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯಲು ದೈವಭಕ್ತಿ ಸಹಕಾರಿಯಾಗಿದ್ದು, ಇತರೆ ಧರ್ಮಿರೊಂದಿಗೆ ಸಹಬಾಳ್ವೆ ಯಿಂದ ಜೀವಿಸಿ ಶಾಂತಿ ಸಂದೇಶವನ್ನು ಸಾರಬೇಕು. ತಮ್ಮ ಪವಿತ್ರ ಗ್ರಂಥವೇ ತಿಳಿಸಿರುವಂತೆ ಅಕ್ಕಪಕ್ಕದ ಮನೆಯವರೊಟ್ಟಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಅವರ ನೋವಿಗೆ ಸ್ಪಂದಿಸಬೇಕು.
ಅಲ್ಲದೆ ಪ್ರತಿಯೊಬ್ಬರೂ ದಾನ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಂದೇಶ ಸಾರಿದರು. ಬಕ್ರೀದ್ ಹಬ್ಬದ ಪ್ರಯುಕ್ತ ಜಿಲ್ಲಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು