Karunadu Studio

ಕರ್ನಾಟಕ

Narayana Yaji Column: ಜೀವನದ ಭಿನ್ನಮುಖಿ ಅಂಶಗಳ ಕಥಾನಕ – Kannada News | A story of the contrasting aspects of life


ನಾರಾಯಣ ಯಾಜಿ

ಅಬ್ಳಿ ಸುಬ್ರಮಣ್ಯ ಹೆಗಡೆಯವರ ‘ಅಮ್ನೋರು’ ಎಂಬ ಕಾದಂಬರಿ ವರ್ತಮಾನದ ಸಾಹಿತ್ಯ

ಸತ್ಯವನ್ನೇ ಪ್ರತಿಪಾದಿಸುತ್ತದೆ.

ಹೆನ್ರಿ ಜೇಮ್ಸ್ ಎನ್ನುವ ಆಂಗ್ಲ ವಿಮರ್ಶಕ, 1884ರಲ್ಲಿ ಪ್ರಕಟವಾದ “ದ ಆರ್ಟ್ ಆಫ್ ಫಿಕ್ಷನ್” ಎನ್ನುವ ಕೃತಿಯಲ್ಲಿ ಕಾದಂಬರಿಯ ಕುರಿತು ಮಹತ್ವದ ಮಾತುಗಳನ್ನಾಡುತ್ತಾನೆ. ಆತನ ಪ್ರಕಾರ “ಕಾದಂಬರಿಯು ಅದರ ವ್ಯಾಪಕ ಅರ್ಥದಲ್ಲಿ ಜೀವನದ ವೈಯಕ್ತಿಕ ಅನುಭವಗಳ ಪ್ರತಿಬಿಂಬ‌ ವಾಗಿದೆ, ಇನ್ನಷ್ಟು ವಿಶದೀಕರಿಸಬೇಕೆಂದರೆ ಅದರಲ್ಲಿ ಬರುವ ವಯಕ್ತಿಕತೆಯೇ ಕಾದಂಬರಿಯ ಮೌಲ್ಯವನ್ನು ನಿರ್ಧರಿಸುತ್ತದೆ, ಅದು ಅನುಭವಿಸಿದ ಅನುಭವದ ತೀವ್ರತೆ ಮತ್ತು ಗಂಭೀರತೆಗೆ ಅನುಗುಣವಾಗಿ ಹೆಚ್ಚು ಕಡಿಮೆಯಾಗಿರಲೂಬಹುದು.

ಆದಾಗ್ಯೂ, ಈ ತೀವ್ರತೆಯು ಬರೆಯುವವನಿಗೆ ಅನುಭವಿಸುವ ಹಾಗೂ ಅಭಿವ್ಯಕ್ತಿಯಾಗಿಸುವ ಸಂಪೂರ್ಣ ಸ್ವಾತಂತ್ರ್ಯವಿಲ್ಲದಿದ್ದರೆ ಸಾಧ್ಯವಿಲ್ಲ. ಅನಿಸಿಕೆಯನ್ನು ಮುಕ್ತವಾಗಿ ಅನುಭವಿಸಿ, ಅದನ್ನು ನಿಸ್ಸಂಕೋಚವಾಗಿ ಅಭಿವ್ಯಕ್ತಿಸುವ ಸ್ವಾತಂತ್ರ್ಯವಿಲ್ಲದಿದ್ದರೆ, ಕಾದಂಬರಿಯು ತೀವ್ರತೆ ಯಿಲ್ಲದ, ಅರ್ಥವಿಲ್ಲದ ಬರವಣಿಗೆಯಾಗಿ ಉಳಿಯುತ್ತದೆ.”

ಈ ದೃಷ್ಟಿಕೋಣದ ಬೆಳಕಿನಲ್ಲಿ ನೋಡಿದರೆ, ಅಬ್ಳಿ ಸುಬ್ರಮಣ್ಯ ಹೆಗಡೆಯವರ ‘ಅಮ್ನೋರು’ ಎಂಬ ಕಾದಂಬರಿ ವರ್ತಮಾನದ ಸಾಹಿತ್ಯ ಸತ್ಯವನ್ನೇ ಪ್ರತಿಪಾದಿಸುತ್ತದೆ. ಲೇಖಕ ತಮ್ಮದೇ ಆದ ಸಂಸಾ ರದ ನೋವುಗಳನ್ನು, ಸಾಮಾಜಿಕ ಶೋಷಣೆಯ ಘಟಕಗಳನ್ನು ಮತ್ತು ಸಾಂಸ್ಕೃತಿಕ ವಿನ್ಯಾಸದ ಭ್ರಷ್ಟ ರೂಪವನ್ನೇ ತನ್ನ ನಿರೂಪಣೆಯಲ್ಲಿ ಧೈರ್ಯದಿಂದ ಎದುರುಗೊಳ್ಳುತ್ತಾರೆ. ಅವರ ಶಬ್ದಗಳು ನಾಟಕೀಯತೆಯ ಅಲಂಕಾರವನ್ನು ತಿರಸ್ಕರಿಸಿ, ಸತ್ಯಾನುಭವದ ನಿಜತೆಯನ್ನು ಹಿಡಿದು ನಿಲ್ಲುತ್ತವೆ. ಈ ಶುದ್ಧ ಅನುಭವವೇ ಕಾದಂಬರಿಯ ಪ್ರಭಾವಶೀಲತೆಯ ಮೂಲವಾಗಿದೆ.

ಇದನ್ನೂ ಓದಿ: Narayana Yaji Column: ವಾಲಿವಧೆ: ರಾಮನ ವ್ಯಕ್ತಿತ್ವಕ್ಕೆ ಒಡ್ಡಿದ ನಿಕಷ; ಉದ್ದೇಶಪೂರ್ವಕವೋ ಅಥವಾ ಹದ ತಪ್ಪಿದ ನಡೆಯೋ?

ಅಬ್ಳಿ ಹೆಗಡೆಯವರು ತನ್ನ ಹರೆಯದ ಕಾಲದಲ್ಲಿ ಬರೆದ ಕಥೆ ‘ಗುಂದ ಮತ್ತು ಅಮ್ನೋರು’. ಅದನ್ನು ಈಗ ತನ್ನ ಎಪ್ಪತ್ತರ ವಯಸ್ಸಿನಲ್ಲಿ ಪ್ರಕಟಿಸುತ್ತಿದ್ದಾರೆ. ಕಥೆಯೆನ್ನುವುದು ಕಾಲದೊಡನೆ ಸಾಗಬೇಕು. ಆದರೆ ಅದರ ವಿಚಾರಗಳು ವರ್ತಮಾನದಲ್ಲಿಯೇ ಇರಬೇಕು. ಇಲ್ಲವಾದರೆ ಅದು ಒಬ್ಸಲೇಟ್ ಆಗಿಬಿಡುತ್ತದೆ. ಮಹಾಕಾವ್ಯಗಳು, ಸಂಸ್ಕೃತ ನಾಟಕಗಳು, ಷೇಕ್ಸ್ ಪಿಯರ್‌ನ ನಾಟಕಗಳು, ಕನ್ನಡದ ಪ್ರಮುಖ ಕಾದಂಬರಿಗಳು ಓದುಗನನ್ನು ಆ ಕಾಲಕ್ಕೆ ಕೊಂಡೊಯ್ಯುತ್ತದೆ, ಮತ್ತು ಆ ಕಾಲದ ಕಥೆಗಳನ್ನು ವರ್ತಮಾನದಲ್ಲಿ ಸೃಷ್ಟಿಸುತ್ತದೆ.

ಕಾಲನ ಪರೀಕ್ಷೆಯಲ್ಲಿ ಗೆದ್ದ ಸಾಹಿತ್ಯಗಳು ಅವು. ಇನ್ನು ಕೆಲವು ಆಯಾ ಕಾಲಕ್ಕೆ ಮಾತ್ರವೇ ಸೀಮಿತವಾಗಿ ಬಿಡುತ್ತವೆ. ಅಬ್ಳಿ ಹೆಗಡೆಯವರ ಕಥೆ ಎರಡನೆ ಸಾಲಿಗೆ ಸೇರಿದಂತಹದು. ‘ಗುಂದ ಮತ್ತು ಅಮ್ನೋರು’ ಕೃತಿಯನ್ನು ಎಪ್ಪತ್ತರ ದಶಕದಲ್ಲಿ ಪ್ರಕಟಿಸಿದ್ದರೆ ಇದು ಆ ಕಾಲದ ಮಹತ್ವ ಪೂರ್ಣ ವೆನಿಸಬಹುದಾದ ಕೃತಿಯಾಗಿಬಿಡುತ್ತಿತ್ತು.

ಇಂದು ಸಮಾಜ ಅನೇಕ ವಿಷಯಗಳಲ್ಲಿ ರಾಜಿಮಾಡಿಕೊಂಡಿದೆ. ಹಾಗಾಗಿ ಹೊಸತಲೆಮಾರಿನ ಓದುಗರನ್ನು ನಮ್ಮ ಕಾಲದ ಓದುಗರನ್ನು ತಟ್ಟಿದಷ್ಟು ತಟ್ಟಲಿಕ್ಕಿಲ್ಲ. ಈ ಕಾದಂಬರಿಯಲ್ಲಿ ಹಲವು ಪಾತ್ರಗಳ ಮುಖಾಮುಖಿ ಇದೆ. ನಾಯಕ ತನ್ನ ಅಪ್ಪ, ಅತ್ತೆ, ರಾಮ ಭಟ್ಟರು, ಅಂತೋನಿ, ಗೌರಿ, ಗಪ್ಪು, ತನ್ನ ಮಗ, ಹೀಗೆ ಎಲ್ಲಾ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಾನೆ.

ಆದರೆ ಇಲ್ಲೆಲ್ಲೂ ಸಂಘರ್ಷವಿಲ್ಲ. ತೀವ್ರವಾಗಿ ಎದುರಿಸುವ ಸಂದರ್ಭಗಳಲ್ಲಿ ಅಬ್ಳಿ ಹೆಗಡೆಯವರ ಮೂಲ ಸ್ವರೂಪವಾದ ವಿನಯವಂತಿಕೆಯಲ್ಲಿ ‘ಸಾಯಲಿ ಸುಮ್ಮನಿರೋಣ’ ಎಂದು ಮೌನ ವಾಗಿಬಿಡುತ್ತವೆ. ಇದನ್ನು ಅವರು ಅಂತೋನಿ ಹೇಳಿದ ರಾಮ ಭಟ್ರು ಮಾಡಿಸಿದ ಕೊಲೆಗಳು, ಅಕ್ರಮ ಬಸಿರು, ಮೊದಲಾದ ವಿಷಯಗಳಲ್ಲಿ ಇನ್ನೇನು ಆತ ಸಿಡಿಯುತ್ತಾನೆ ಎನಿಸುವಾಗ ಹಾಗೇ ಬಿಟ್ಟುಬಿಡುತ್ತಾರೆ. ಅದೇ ರೀತಿ ಮಗನೊಂದಿಗಿನ ಮುಖಾಮುಖಿಯಲ್ಲಿ ಮೌನವಾಗಿ ರೊದಿಸುತ್ತಾರೆ.

ಈ ಕಾದಂಬರಿಯಲ್ಲಿ ಹವಿಗನ್ನಡ ಮತ್ತು ಹೊನ್ನಾವರ ತಾಲೂಕಿನ ಗ್ರಾಮ್ಯ ಕನ್ನಡವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದ್ದಾರೆ. ಮಕ್ಕಳನ್ನು ಸುಮ್ಮನಿರಿಸಲು ಕೊಡುವ ಪೆಪ್ಪರ ಮೆಂಟು ಹೆಗಡೆಯವರ ಕಾದಂಬರಿಯಲ್ಲಿ ರೂಪಕವಾಗಿ ಬಂದಿದೆ. ದೇವಿಮನೆ ಘಟ್ಟದಿಂದ ಗೇರುಸೊಪ್ಪೆಗೆ ಹೋಗುವ ನಾಯಕ ತನ್ನ ನೆನಪಿನ ಸಂಗತಿಗಳನ್ನು ಪುನಹ್ ಸೃಷ್ಟಿಸಲು ಪೆಪ್ಪರ ಮೆಂಟ್ ಚೀಪುತ್ತಾ ಸಾಗುತ್ತಾನೆ.

ಗುಟ್ಕಾವನ್ನಲ್ಲ. ಆತನ ತಂದೆ ಮೊಮ್ಮಗನನ್ನು ರಮಿಸಲು ಪೆಪ್ಪರಮೆಂಟ್ ಕೊಡುವುದು ಅರ್ಥಪೂರ್ಣವಾಗಿದೆ. ಒಂದರ್ಥದಲ್ಲಿ ಘಟ್ಟದಿಂದ ಹರಿದು ಸಮುದ್ರವನ್ನು ಸೇರುವ ನದಿ ಶರಾವತಿಯಂತೆ ಕಾದಂಬರಿ ರಭಸವಾಗಿ ಇಳಿದು ಕುಮಟಾದಿಂದ ಗೇರುಸೊಪ್ಪೆಯೆ ವರೆಗೆ ನಿಧಾವವಾಗಿ ಹರಿಯುತ್ತಾ ಅನುಭವದ ಮೂಟೆಯನ್ನು ತೆರೆದಿಡುತ್ತದೆ.

ಹೊಳೇಸಾಲಿನ ಬದುಕಿನ ವಿಧಾನವು ಅವರ ಮೊದಲ ಕಾದಂಬರಿ “ಗುಂದ”ದಲ್ಲಿ ಪರಿಣಾಮ ಕಾರಿಯಾಗಿ ಬಂದಿದೆ. ಹೆಗಡೆಯವರ ಶೈಲಿ ಸಂವೇದನಾತ್ಮಕವಾದರೂ ಅತ್ಯಂತ ಶಿಷ್ಟ. ಅವರು ಯಾವುದೇ ಭಾವನಾತ್ಮಕ ಹಿಗ್ಗು ಅಥವಾ ಕೃತಕ ಮೇಳಪಾಟಿಲ್ಲದೆ, ತಮ್ಮ ಅನುಭವದ ತೀವ್ರತೆ ಯಿಂದಲೇ ಶಕ್ತಿಶಾಲಿ ವಾಕ್ಯಗಳನ್ನು ರೂಪಿಸುತ್ತಾರೆ.

ಕಥೆ ಸಾಗುವ ಹಾದಿಯಲ್ಲಿ ಭಟ್ಟರ ಧರ್ಮದ ಶೋಷಣೆ, ಮದುವೆಯ ಅಕ್ರಮ, ದೇವದೇವಿಯ ಕಲ್ಪಿತ ಆಯ್ಕೆ ಇವೆಲ್ಲವೂ ತೀವ್ರವಾದ ಸಾಮಾಜಿಕ ವೈಫಲ್ಯಗಳಿಗೆ ರೂಪಕಗಳಾಗುತ್ತವೆ. ಈ ಎಲ್ಲವುಗಳಲ್ಲಿ ಒಂದು ವಿಶೇಷತೆ ಎಂದರೆ, ಲೇಖಕ ಶೋಷಿತರನ್ನು ಕೇವಲ ತಾರತಮ್ಯದ ಶಿಕಾರ ರಾಗಲು ಬಿಡುವುದಿಲ್ಲ.

ಅವರು ಆ ಶೋಷಣೆಯ ವಿರುದ್ಧ ಒಳಸೂಜಿಯಂತೆ ಬೆಳೆಯುತ್ತಾರೆ. ಅಂತೋಣಿಯಾಗಿ ಬೆಳೆದ ಬಾಲಕನ ಪಾತ್ರ ಈ ನಿಟ್ಟಿನಲ್ಲಿ ಕಾದಂಬರಿಯ ಆಂತರ್ಯ ಶಕ್ತಿಯ ಪ್ರತಿನಿಽ. ಆತನು ಮೌನ ಪ್ರೇಕ್ಷಕನಾಗಿ ಆರಂಭಿಸಿದರೂ, ಕೊನೆಗೆ ಸತ್ಯದ ಘೋಷಕನಾಗಿ ಎದ್ದು ನಿಂತು ಕಥೆಯ ತಾತ್ವಿಕ ಪಿತಾಮಹನಂತೆ ಬೆಳೆಯುತ್ತಾನೆ.

ಅಬ್ಳಿ ಹೆಗಡೆಯವರು ತಮ್ಮ ಅನುಭವದ ತೀವ್ರತೆ, ನಿರೂಪಣೆಯ ತಾಳಮೇಳ ಇವೆಲ್ಲವೂ ಹೆನ್ರಿ ಜೇಮ್ಸ್ ಕಾದಂಬರಿಯ ಕುರಿತು ಹೇಳಿದ ‘ನಿಸ್ಸಂಕೋಚವಾಗಿ ಅಭಿವ್ಯಕ್ತಿಸುವ’ ಉದಾಹರಣೆಯನ್ನು ನೆನಪಿಸುತ್ತದೆ. ಅಮ್ನೋರು ಒಂದು ಕಾಲಘಟ್ಟದ ಮಾತ್ರವಲ್ಲ, ಸಾಹಿತ್ಯದ ಒಳಗೆ ಭದ್ರವಾಗಿ ನಿಂತ ಒಂದು ಜಾನಪದ ಧ್ವನಿ. ಕತ್ತಲೆಕೋಣೆಯೊಳಗೇ ಉರಿವ ಜ್ವಾಲೆ. ಗೌರಿ, ಅಂತೋನಿ, ಅಸಹಾಯಕ ಕಥಾನಾಯಕ ಇವರೆಲ್ಲರೂ ನೆನಪಿನಾಳದಲ್ಲಿ ಉಳಿದು ನಮ್ಮನ್ನು ಕಾಡುತ್ತಲೇ ಇರುತ್ತಾರೆ. ಇದು ಕಾದಂಬರಿಯ ಗೆಲುವೂ ಹೌದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »