ಬೆಂಗಳೂರು: ಝೀ ಕನ್ನಡದ ಜನಪ್ರಿಯ ಧಾರಾವಾಹಿ ʼಪುಟ್ಟಕ್ಕನ ಮಕ್ಕಳುʼ (Puttakkana Makkalu) ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ್ದು, ಆರಂಭದಿಂದ ಇಲ್ಲಿವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಗಂಡನಿಂದ ವಂಚಿಳಾದ ಹೆಣ್ಣು ಕುಗ್ಗದೇ ಜೀವನ ಕಟ್ಟಿಕೊಂಡ ಕಥೆ ಇದರಲ್ಲಿದೆ. ಛಲವೊಂದಿದ್ದರೆ ಸಾಕು ಸಾಧಿಸಿ ತೋರಿಸಬಹುದು ಎಂಬುದನ್ನು ಸಾಬೀತು ಪಡಿಸಿದ ಕಥೆಯೇ ʼಪುಟ್ಟಕ್ಕನ ಮಕ್ಕಳುʼ. ಜೆ.ಎಸ್.ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ಈ ಧಾರವಾಹಿ ಝೀ ಕನ್ನಡ ವಾಹಿನಿಯಲ್ಲಿ 2021ರ ಡಿಸೆಂಬರ್ 13ರಿಂದ ಪ್ರಸಾರವಾಗುತ್ತಿದೆ. ʼಹೆಣ್ಣು ಮಕ್ಕಳ ಹೆತ್ತೋಳು ಎಲ್ಲ ದೇವರಿಗೂ ದೊಡ್ಡೋಳುʼ ಎಂಬ ಶೀರ್ಷಿಕೆ ಗೀತೆಯಿಂದಲೇ ಎಲ್ಲರ ಮನಸೆಳೆದು, ಮೊದಲ ವಾರದ ರೇಟಿಂಗ್‌ನಲ್ಲಿ 13.5 ಟಿವಿಆರ್ ಗಳಿಸಿ ಇಡೀ ಭಾರತದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ದಾಖಲೆ ಸೃಷ್ಟಿಸಿತು.
ಆರೂರು ಜಗದೀಶ್ ಅವರ ಸಾರಥ್ಯದಲ್ಲಿ ಚಿತ್ರೀಕರಣಗೊಂಡ ಮೊದಲ ಕಂತುಗಳು ‘ಸಣ್ಣ ಪರದೆಯ ದೊಡ್ಡ ಸಿನಿಮಾ’ ಎಂಬ ಮನ್ನಣೆ ಗಳಿಸಿದವು. ನಿರ್ಮಾಪಕಿ ಸ್ಮಿತಾ ಜೆ. ಶೆಟ್ಟಿ ಅವರ ಜೆಎಸ್ ಪ್ರೊಡಕ್ಷನ್ಸ್ ಸಂಸ್ಥೆಯು ‘ಶುಭ ವಿವಾಹʼ, ʼಜೋಡಿ ಹಕ್ಕಿʼ, ʼಜೊತೆ ಜೊತೆಯಲಿ’ಯಂತಹ ಯಶಸ್ವಿ ಧಾರಾವಾಹಿಗಳನ್ನು ನೀಡಿದ್ದು, ಸಾವಿರ ಸಂಚಿಕೆಗಳನ್ನು ಪೂರೈಸಿರುವ ‘ಪುಟ್ಟಕ್ಕನ ಮಕ್ಕಳು’ ಈ ಸಂಸ್ಥೆಯ ಮೈಲುಗಲ್ಲಾಗಿದೆ.
ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಾರಿಕಾ, ಗುರು ಹೆಗ್ಡೆ ಅವರಂತಹ ಹಿರಿಯ ಕಲಾವಿದರ ಜತೆಗೆ, ಧನುಷ್, ಅಕ್ಷರ, ವಿದ್ಯಾ, ಶಿಲ್ಪಾ ಮುಂತಾದ ಉದಯೋನ್ಮುಖ ಕಲಾವಿದರ ತಾರಾಗಣ ಹೊಂದಿರುವ ʼಪುಟ್ಟಕ್ಕನ ಮಕ್ಕಳುʼ ರಾಜ್ಯದ ಪ್ರತಿ ಮನೆಯ, ಪ್ರತಿದಿನದ ಅವಿಭಾಜ್ಯ ಅಂಗವಾಗಿದೆ. ಈ ಸಾಧನೆಯಲ್ಲಿ ತೆರೆಯ ಹಿಂದಿನ ತಾಂತ್ರಿಕ ವರ್ಗದ ಶ್ರಮವೂ ಸಾಕಷ್ಟಿದೆ.
ಬರಹಗಾರ ಸತ್ಯಕಿ ಅವರ ಚಿತ್ರಕಥೆ ಮತ್ತು ಸಂಭಾಷಣೆ ಈ ಧಾರಾವಾಹಿಯ ಜೀವಾಳ. ಪ್ರಧಾನ ನಿರ್ದೇಶಕ ಆರೂರು ಜಗದೀಶ್, ಸಂಚಿಕೆ ನಿರ್ದೇಶಕ ಮಹೇಶ್ ಸಾರಂಗ್, ಸಹ ನಿರ್ದೇಶಕ ಮುರಳಿ, ಸಂಕಲನಕಾರ ಜಯಚಂದ್ರ ಹಾಗೂ ಪ್ರೊಡಕ್ಷನ್ ಮ್ಯಾನೇಜರ್‌ನಿಂದ ಹಿಡಿದು, ಸೆಟ್ ಹುಡುಗರು, ಕ್ಯಾಮೆರಾ ಮತ್ತು ಲೈಟ್ ವಿಭಾಗ, ಮೇಕಪ್, ಊಟೋಪಚಾರ, ಆಫೀಸಿನ ಅಕೌಂಟ್ ಸೆಕ್ಷನ್ ಹೀಗೆ ಎಲ್ಲರ ಶ್ರಮವೂ ಈ ಧಾರಾವಾಹಿಯ ಯಶಸ್ಸಿಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ಧಾರಾವಾಹಿಯ ಮೂಲ ಉದ್ದೇಶ ಮನರಂಜನೆಯೇ ಆಗಿದ್ದರೂ, ಅದು ಕೇವಲ ಅಷ್ಟಕ್ಕೆ ಸೀಮಿತವಾಗದೆ, ʼಪುಟ್ಟಕ್ಕನ ಮಕ್ಕಳುʼ ಸಾಕಷ್ಟು ಸಾಮಾಜಿಕ ವಿಷಯಗಳನ್ನು ಚರ್ಚಿಸುವ ಕಥೆಯಾಗಿದೆ. ಅಷ್ಟೇ ಅಲ್ಲದೆ, ಕೌಟುಂಬಿಕ ಮೌಲ್ಯಗಳು, ಹೊಂದಾಣಿಕೆ, ತ್ಯಾಗ, ಪ್ರಾಮಾಣಿಕತೆ, ಸಮಸ್ಯೆಗಳನ್ನು ಎದುರಿಸುವ ಛಲ ಇನ್ನಿತರ ಜೀವನ ಪಾಠಗಳನ್ನು ಆಗಾಗ್ಗೆ ಬೋಧಿಸುವಲ್ಲಿ ಪುಟ್ಟಕ್ಕ ಮೇಷ್ಟ್ರು ಆಗಿದ್ದಾಳೆ. ಇತ್ತೀಚೆಗೆ ಮಹಿಳೆಯೊಬ್ಬರು ತಾವು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ನೋಡಿ, ಸ್ಫೂರ್ತಿಗೊಂಡು ಹೊಟೇಲ್ ಶುರು ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ರಾಜ್ಯದ ಹಲವೆಡೆ ‘ಪುಟ್ಟಕ್ಕನ ಮೆಸ್’ ಎಂಬ ಹೊಟೇಲ್‍ಗಳೂ ಸಹ ಕಾಣ ಸಿಗುತ್ತಿವೆ.
ಇದನ್ನು ಓದಿ: Puttakkana Makkalu: ಪುಟ್ಟಕ್ಕನ ಮಕ್ಕಳು ಮುಕ್ತಾಯ ಆಗುತ್ತೆ ಎಂದವರಿಗೆ ಮತ್ತೊಂದು ಟ್ವಿಸ್ಟ್ ಕೊಟ್ಟ ನಿರ್ದೇಶಕರು
ಒಂದು ಕಥೆಯನ್ನು ಬರಹಗಾರ ಎಷ್ಟೇ ಚಂದ ಬರೆದರೂ, ನಿರ್ದೇಶಕ ಅಚ್ಚುಕಟ್ಟಾಗಿ ಚಿತ್ರಿಸಿದರೂ, ನಟರು ಪ್ರಬುದ್ದತೆಯಿಂದ ನಟಿಸಿದರೂ, ಅದಕ್ಕೊಂದು ವಾಹಿನಿ ದೊರೆತಾಗಲೇ ಜನರನ್ನು ಮುಟ್ಟುತ್ತದೆ. ಅಂತಹ ಕೆಲಸವನ್ನು ಝೀ ಕನ್ನಡ ವಾಹಿನಿ ಮಾಡಿದೆ. ಝೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು ಈ ಕಥೆ ಮೇಲಿಟ್ಟಂತಹ ನಂಬಿಕೆ ಮತ್ತು ವಾಹಿನಿಯ ಇಡೀ ತಂಡದ ನೆರವು, ಇಂದು ಪುಟ್ಟಕ್ಕನನ್ನು ‘ಸಾವಿರದ ಪುಟ್ಟಕ್ಕ’ಳನ್ನಾಗಿ ರೂಪಿಸಿದೆ.