ಕಾಸರಗೋಡು: ಕೇರಳದ (Kerala Viral News) ಕಾಸರಗೋಡು (Kasaragod) ಜಿಲ್ಲೆಯ ಮಾಲೋಂ ಪಟ್ಟಣದಲ್ಲಿ 50 ವರ್ಷಗಳ ಹಿಂದೆ ನಾಲ್ಕನೇ ತರಗತಿಯಲ್ಲಿ ನಡೆದ ಜಗಳವೊಂದು (Fight At School) ಮತ್ತೆ ಹೊಡೆದಾಟಕ್ಕೆ ಕಾರಣವಾಗಿದೆ. ಇಬ್ಬರು ವೃದ್ಧರು ತಮ್ಮ ಶಾಲಾ ಸಹಪಾಠಿಯ ಮೇಲೆ ಕಲ್ಲಿನಿಂದ ದಾಳಿ ನಡೆಸಿದ ಘಟನೆ ಸೋಮವಾರ ವರದಿಯಾಗಿದೆ. ಆರೋಪಿಗಳಾದ ಮಲೋತು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಾಪ್ಲಾಕ್ಕಲ್, ಗಾಯಾಳು ವಿಜೆ ಬಾಬು (62) ಅವರನ್ನು ಕಲ್ಲಿನಿಂದ ಹೊಡೆದಿದ್ದಾರೆ.
ದಾಳಿಯಿಂದ ಬಾಬು ಎರಡು ಹಲ್ಲುಗಳನ್ನು ಕಳೆದುಕೊಂಡಿದ್ದು, ಕಣ್ಣೂರಿನ ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಲ್ಲರಿಕುಂಡು ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, “ಘಟನೆಯಲ್ಲಿ ಹಲ್ಲುಗಳು ಮುರಿದಿದ್ದರೆ, ಈ ಕೃತ್ಯ ಜಾಮೀನು ರಹಿತ ಅಪರಾಧವಾಗಲಿದೆ. ವೈದ್ಯರ ಬಳಿ ಮಾಹಿತಿ ಪಡೆಯುತ್ತೇವೆ” ಎಂದಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126(2), 118(1), ಮತ್ತು 3(5)ರಡಿ ಅಕ್ರಮ ಸಂಯಮ, ಉದ್ದೇಶಪೂರ್ವಕ ಗಾಯ, ಮತ್ತು ಸಾಮಾನ್ಯ ಉದ್ದೇಶದ ಆರೋಪಗಳಡಿ ಪ್ರಕರಣ ದಾಖಲಾಗಿದೆ.
50 ವರ್ಷದ ದ್ವೇಷ
ಆರೋಪಿಗಳು ಮತ್ತು ಬಾಬು, ಬಾಲಲ್ ಗ್ರಾಮ ಪಂಚಾಯಿತಿಯ ಮಾಲೋಂನ ನಾಟಕ್ಕಲ್ಲು ಆದರಿತ ಶಾಲೆಯಲ್ಲಿ 50 ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದರು. ಬಾಬು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, “ನಾಲ್ಕನೇ ತರಗತಿಯಲ್ಲಿ ಬಾಲಕೃಷ್ಣನ್ ಒಮ್ಮೆ ನನ್ನನ್ನು ಹೊಡೆದಿದ್ದ. ಆದರೂ, ನಾವು ಮೂವರು ಸ್ನೇಹಿತರಂತೆ ವರ್ಷಗಳಿಂದ ಒಟ್ಟಿಗೆ ಕೃಷಿ ಮಾಡುತ್ತಿದ್ದೆವು” ಎಂದಿದ್ದಾರೆ. ಆದರೆ, ಸೋಮವಾರ ಮಾಲೋಂನ ಜನಗ್ರಾಮ್ ಹೋಟೆಲ್ ಮುಂದೆ ಭೇಟಿಯಾದಾಗ ಹಳೆಯ ಜಗಳದ ವಿಷಯ ಮತ್ತೆ ಚರ್ಚೆಗೆ ಬಂದು ಕಾದಾಟಕ್ಕೆ ಕಾರಣವಾಯಿತು. ಬಾಲಕೃಷ್ಣನ್ ಬಾಬು ಅವರನ್ನು ಹಿಡಿದಿಕೊಂಡರೆ, ಮ್ಯಾಥ್ಯೂ ಕಲ್ಲಿನಿಂದ ಮುಖ ಮತ್ತು ದೇಹಕ್ಕೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬು, “ಮ್ಯಾಥ್ಯೂ ಮತ್ತು ಬಾಲಕೃಷ್ಣನ್ ದೀರ್ಘಕಾಲ ಹೊಂದಿದ್ದ ದ್ವೇಷದಿಂದಾಗಿ ಈ ಜಗಳವಾಗಿದೆ” ಎಂದಿದ್ದಾರೆ. ಪೊಲೀಸರ ಪ್ರಕಾರ, ಬಾಬು ಆರೋಪಿಗಳಿಂದ 1.5 ಲಕ್ಷ ರೂ. ಪರಿಹಾರ ಕೋರಿ, ಕೋರ್ಟ್‌ನಿಂದ ಹೊರಗೆ ರಾಜಿಗೆ ಒಲವು ತೋರಿದ್ದಾರೆ.