ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಜತ್ ಪಾಟಿದಾರ್ (Rajat Patidar)ನಾಯಕತ್ವದಲ್ಲಿ 18 ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿದರೆ, ಶ್ರೇಯಸ್ ಅಯ್ಯರ್ (Shreyas Iyer) ಸಾರಥ್ಯದ ಪಂಜಾಬ್ ಕಿಂಗ್ಸ್ ಎರಡನೇ ಬಾರಿ ರನ್ನರ್ ಅಪ್ ಆಗಿದೆ. ಇದರ ನಡುವೆ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu) 2025ರ ಐಪಿಎಲ್ ಟೂರ್ನಿಯ ತನ್ನ ಬಲಿಷ್ಠ ತಂಡವನ್ನು ಕಟ್ಟಿದ್ದಾರೆ. ಆದರೆ, ಚಾಂಪಿಯನ್ ನಾಯಕ ರಜತ್ ಪಾಟಿದಾರ್ ಅವರನ್ನು ಹೊರಗಿಟ್ಟು ಹಿಟ್‌ಮ್ಯಾನ್ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಿದ್ದಾರೆ.
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಮತ್ತೊಂದು ಕಡೆ ಎಂಎಸ್ ಧೋನಿ ಕೂಡ ಅಷ್ಟೇ ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ 2024 ರಿಂದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರೆ, ರೋಹಿತ್ ಶರ್ಮಾ ಇಂಪ್ಯಾಕ್ಟ್ ಆಟಗಾರನಾಗಿ ಆಡಿದ್ದರು. ಆದರೆ ನವಜೋತ್ ಸಿಂಗ್ ಸಿಧು ತಮ್ಮ ತಂಡದ ನಾಯಕರಾಗಿ ರೋಹಿತ್ ಶರ್ಮಾಗೆ ಹೊಣೆ ನೀಡಿದ್ದಾರೆ.
IPL 2025: ಆರ್‌ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!
ವಿರಾಟ್ ಕೊಹ್ಲಿಗೂ ಸ್ಥಾನ
ಸಿಕ್ಸರ್‌ಗಳ ಸರದಾರ ನವಜೋತ್ ಸಿಂಗ್ ಸಿಧು ತಾವು ಕಟ್ಟಿರುವ ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿಗೂ ಸ್ಥಾನ ನೀಡಿದ್ದಾರೆ. ತಮ್ಮ ತಂಡದ ಅಗ್ರ ನಾಲ್ಕು ಬ್ಯಾಟಿಂಗ್ ಕ್ರಮಾಂಕಗಳಿಗೆ ನಾಯಕ ರೋಹಿತ್ ಶರ್ಮಾ, ಜೋಸ್ ಬಟ್ಲರ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್‌ಗೆ ಸ್ಥಾನ ಕಲ್ಪಿಸಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ಹಾಗೂ ವಿಕೆಟ್ ಕೀಪರ್ ನಿಕೋಲಸ್ ಪೂರನ್, ನಂತರದ ಸ್ಥಾನಗಳನ್ನು ಪಾಂಡ್ಯ ಬದ್ರರ್ಸ್ ಆದ ಹಾರ್ದಿಕ್ ಹಾಗೂ ಕೃಣಾಲ್‌ಗೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಕೃಣಾಲ್ ಪಾಂಡ್ಯ ಮಹತ್ತರ ಪಾತ್ರ ವಹಿಸಿದ್ದರು. ಫೈನಲ್ ಪಂದ್ಯದಲ್ಲೂ 4 ಓವರ್‌ಗಳಲ್ಲಿ 17 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ಧ ಕೃಣಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್ ಸ್ಟಾರ್ಕ್!
ಕನ್ನಡಿಗ ಪ್ರಸಿಧ್ ಕೃಷ್ಣಗೂ ಸ್ಥಾನ
2025ರ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ (25) ಪಡೆದು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಗುಜರಾತ್ ಟೈಟನ್ಸ್ ತಂಡದ ವೇಗಿ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ತಮ್ಮ ತಂಡದಲ್ಲಿ ಸಿಧು ಸ್ಥಾನ ಕಲ್ಪಿಸಿದ್ದಾರೆ. ಇನ್ನು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಮೂರನೇ ಬೌಲರ್ ಆರ್‌ಸಿಬಿ ವೇಗಿ ಜಾಸ್ ಹೇಝಲ್‌ವುಡ್, ಮುಂಬೈ ಇಂಡಿಯಯನ್ಸ್‌ನ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ನೂರ್ ಅಹ್ಮದ್ (24 ವಿಕೆಟ್) ಗೆ ಸ್ಥಾನ ನೀಡುವ ಮೂಲಕ ನವಜೋತ್ ಸಿಂಗ್ ಸಿಧು ಬಲಿಷ್ಠ ಐಪಿಎಲ್ ತಂಡವನ್ನು ಪೂರ್ಣಗೊಳಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಕಟ್ಟಿದ 2025ರ ಐಪಿಎಲ್ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಜೋಸ್ ಬಟ್ಲರ್, ಶ್ರೇಯಸ್ ಅಯ್ಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ನೂರ್ ಅಹ್ಮದ್, ಪ್ರಸಿಧ್ ಕೃಷ್ಣ, ಜಸ್‌ಪ್ರೀತ್ ಬುಮ್ರಾ, ಜಾಸ್ ಹೇಝಲ್‌ವುಡ್