Karunadu Studio

ಕರ್ನಾಟಕ

Arecanut Leaf Spot Disease: ಅಡಿಕೆ ಎಲೆ ಚುಕ್ಕಿ ರೋಗ ಕೋವಿಡ್‌ನಂತೆ ಹರಡುತ್ತಿದ್ದರೂ ಯಾರೂ ಮಾತಾಡ್ತಾ ಇಲ್ಲ ಯಾಕೆ!? – Kannada News | Even though the Arecanut Leaf Spot Disease is spreading like COVID, why is no one talking about it


| ಅರವಿಂದ ಸಿಗದಾಳ್, ಮೇಲುಕೊಪ್ಪ

ಅಡಿಕೆ ಎಲೆ ಚುಕ್ಕಿ ಬಗ್ಗೆ ಯಾರೂ ಮಾತಾಡ್ತಾ ಇಲ್ಲ ಯಾಕೆ? ಅಡಿಕೆ ಎಲೆ ಚುಕ್ಕಿ ನಿಯಂತ್ರಣ ಆಯ್ತಾ!? ನಮ್ಮ ತೋಟದಲ್ಲಿ ಮಾತ್ರ ಈ ರೋಗ ಕಾಣಿಸುತ್ತಿರುವುದಾ? ಈ ರೀತಿಯ ಪ್ರಶ್ನೆಗಳನ್ನು ಎಲೆ ಚುಕ್ಕಿ ರೋಗ (Arecanut Leaf Spot Disease) ಕಾಣಿಸುತ್ತಿರುವ ಮಲೆನಾಡಿನ ತೋಟಗಳ ರೈತರು ಪ್ರಶ್ನೆ ಮಾಡುತ್ತಿದ್ದಾರೆ. ಬೇಸಿಗೆಯ ಬಿಸಿಲಿಗೆ ತಟಸ್ಥವಾಗಿದ್ದ ಅಡಿಕೆ ಎಲೆ ಚುಕ್ಕಿ ರೋಗ, ಮಲೆನಾಡಿನ ಬಹುತೇಕ ತೋಟಗಳಲ್ಲಿ ಕಳೆದ ಒಂದು ತಿಂಗಳಿಂದ ಮತ್ತೆ ಹೆಡೆ ಎತ್ತಿದೆ. ಆತಂಕ ಸೃಷ್ಟಿಸುತ್ತಿದೆ.

ಮೋಡ-ಬಿಸಿಲಿನ ಆಟ, ಆಗಾಗ ಆರ್ಭಟಿಸುವ ಮಳೆ, ಹೆಚ್ಚಿದ ವಾತಾವರಣದ ತೇವಾಂಶಗಳಿಂದ ಅಡಿಕೆ ಎಲೆ ಚುಕ್ಕಿ ರೋಗದ ಸೋಂಕು ಮುಂಗಾರು ಪೂರ್ವದಲ್ಲೇ ಕರೋನಾದಂತೆ ನಿಧಾನವಾಗಿ ಹರಡುತ್ತಿದೆ.

ಕಮಲಹಾಸನ್ ‘ಕಪ್ಪು ಚುಕ್ಕಿ’ ರೋಗ, RCB ಕಪ್ ಉನ್ಮಾದ ಕಾಯಿಲೆ, ಕಾಲ್ತುಳಿತದ ಕರಾಳ ಸಾವು, ಪೊಲಿಟಿಕಲ್ ರಾಸ್ಕಲ್ಸ್ (ದುಷ್ಟರ) ಡ್ರಾಮಾಗಳು, ಸಿಕ್ಕಾಬಟ್ಟೆ ಊಟದ ಮನೆಗಳು, ರೆಡ್-ಆರೆಂಜ್-ಬ್ಲಾಕ್ ಅಲರ್ಟ್ ಮಳೆ ಧಾರಾವಾಹಿ, ಆಪರೇಷನ್ ಸಿಂದೂರ, ಟ್ರಂಪ್-ಮೋದಿ-ಖರ್ಗೆ-ರಾಹುಲ್ ಮಾತುಗಳು, ಅಲ್ಲೆಲ್ಲೋ ಅಡಿಕೆ ಹಾಳೆ ತಟ್ಟೆಗೆ ನಿಷೇಧ, ಇಲ್ಲೆಲ್ಲೋ ಅಡಿಕೆ ವಿಸ್ತರಣೆ ವಿಷಾದ, ಇದೆಲ್ಲದರ ನಡುವೆ ಬಾಕಿ ಉಳಿದ ಮಳೆಗಾಲದ ಕೃಷಿ ಕೆಲಸ, ಬೆಳೆದು ನಿಂತು ತೋಟದ ಕಳೆ, ಹೆಚ್ಚಾದ ಕಾಡುಕೋಣ ಕಾಟ, ಇನ್ನೂ ಶುರು ಮಾಡದ ಕಪ್ಪು ಹೆರೆತ, ತೋಟದ ಕೆಲಸಕ್ಕೆ ಕಾರ್ಮಿಕರ ಕೊರತೆ, ಮುಂಗಾರು ಬಲಗಾಲಿಟ್ಟು ಪ್ರವೇಶ ಮಾಡಿ 10 ದಿನ ಆದಮೇಲೂ ನಿರಂತರ ಮಳೆ ಇಲ್ಲದೆ ಬಿಸಿಲು ಮಳೆಯ ಲೀಗ್ ಮ್ಯಾಚ್!!!

Arecanut Leaf Spot Disease_

ಇದೆಲ್ಲವುದೂ ಮುನ್ನೆಲೆಗೆ ಬಂದ ಪರಿಣಾಮ, ಯಾರು ಅಡಿಕೆ ಎಲೆ ಚುಕ್ಕಿ ಮಾತಾಡ್ತಾ ಇಲ್ಲ, ಮಾತಾಡಿದರೂ ದೊಡ್ಡ ಬ್ರೇಕಿಂಗ್ ಸುದ್ಧಿ ಆಗ್ತಾ ಇಲ್ಲ ಎಂದು ಅಸಹಾಯಕ ಅಡಿಕೆ ಬೆಳೆಗಾರರ ಅಭಿಪ್ರಾಯ.

“ಮಾತಾಡಿ ಪ್ರಯೋಜನ ಏನು? ಅಡಿಕೆ ರೋಗದ ಸಮಸ್ಯೆಗಳ ಬಗ್ಗೆ ಸರಕಾರ ಸ್ಪಂದಿಸಲ್ಲ, ವಿಜ್ಞಾನಿಗಳದು ಯಾವತ್ತೂ ಮುಗಿಯದ ಅಕಾಡೆಮಿಕ್ ಅಧ್ಯಯನ. ಇನ್ನು ಯಾವುದೇ ಪರ್ಸೆಂಟೇಜ್ ಸಿಗದೇ ಇರುವುದರಿಂದ ಜನಪ್ರತಿನಿಧಿಗಳು ಅಡಿಕೆ ಎಲೆ ಚುಕ್ಕಿ ವಿಷಯ ಇಟ್ಕೊಂಡು ಊರಿಗೂ ಬರಲ್ಲ, ಕೇರಿಗೂ ಬರಲ್ಲ, ಕೇರೂ (ಕೇರ್) ಮಾಡಲ್ಲ!. ಎಲೆ ಚುಕ್ಕಿ ಇಟ್ಕೊಂಡು ರಾಜಕಾರಣ ಮಾಡಿ, ಮಾತಾಡಿ ಕ್ರೆಡಿಟ್ ತಗೋಳೋಕೆ ಪುರುಸೊತ್ತಿಲ್ಲದಷ್ಟು ಕಪ್ಪು ಚುಕ್ಕಿಗಳು ಅವರುಗಳ ಮೇಲೇ ಬಂದಿವೆ. ಅದಕ್ಕೇ ಮುಲಾಮು ಸಿಗುತ್ತಿಲ್ಲ! ಇನ್ನು ನಿಯಂತ್ರಣ, ಮಾರ್ಗಸೂಚಿಗಳೆಲ್ಲ ದೂರದ ಮಾತಾಯ್ತು” ಎಂದು ಕೆಲವು ರೈತರ ಅನುಭವದ ನುಡಿಗಳು!

ಇದರ ಹೊರತಾಗಿ, ರೈತರು ಬೇಡ ಬೇಡ ಅಂತ ಬಡ್ಕೊಂಡ್ರೂ… ನೂರೈವತ್ತು ರುಪಾಯಿಯ ಉಚಿತ ಹೆಕ್ಸಾಕೊನಾಸೋಲ್ ಪ್ರಾಪಿಕೊನಾಸೋಲ್ ಬಾಟಲಿ ಕೊಟ್ಟು “ಇದನ್ನು ಮಳೆ ಇಲ್ಲದಿರುವಾಗ ಸ್ಪ್ರೇ ಮಾಡಿ. ಎಲೆ ಚುಕ್ಕಿ ರೋಗ ಭೂಲೋಕದಲ್ಲೇ ಇರೋದಿಲ್ಲ” ಅಂತ ‘ತಲೆ ಮೇಲೆ ಹೊಡೆದ ಸತ್ಯ’ ಹೇಳಿ ‘ಸೋಲ್‌ಗಳ’ ಸ್ಟಾಕ್ ಕ್ಲಿಯರ್ ಮಾಡಿದ ಇಲಾಖೆಗಳು ಕೂಡ ಮಾತಾಡದೆ ಸೈಲೆಂಟಾಗಿವೆ!

Arecanut

ಈಗ ಹಗುರದಿಂದ ಸಾಧಾರಣವಾಗಿ ಭಾರೀ ಮಟ್ಟದಲ್ಲಿ ಮಾತಾಡ್ತಾ ಇರುವುದು ಎಲೆ ಚುಕ್ಕಿ ರೋಗದ ಕೊಲೆಟೋಟ್ರೈಕಮ್‌ ಫಂಗಸ್‌ಗಳು ಮಾತ್ರ!. ಅವುಗಳು ಮಾತಾಡ್ತಾ ಮಾತಾಡ್ತಾ ರೋಗವನ್ನು ವಿಸ್ತರಣೆ ಮಾಡ್ತಾ ಇವೆ. ಫಂಗಸ್‌ಗಳು ಮದುವೆ, ಮಾತುಕತೆ, ಪ್ರಸ್ತ, ವಂಶವಿಸ್ತರಣೆಗಳನ್ನು ತೇವಾಂಶ ಹೆಚ್ಚಿದ ವಾತಾವರಣದಲ್ಲಿ ‘ವಿಜಯೋತ್ಸವದ ಉನ್ಮಾದದೊಂದಿಗೆ’ ನೂಕು ನುಗ್ಗಲಿನೊಂದಿಗೆ ಅಡಿಕೆ ತೋಟದ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುತ್ತಿವೆ! ಅಡಿಕೆ ಮರಗಳನ್ನೇ ಬಲಿ ತೆಗೆದುಕೊಳ್ಳುವಂತೆ ತುಳಿಯುತ್ತಿವೆ! ಬೇಸಿಗೆಯಲ್ಲಿ ಘೋಷಿಸಿದ್ದ ‘ಕದನ ವಿರಾಮ’ವನ್ನು ಹಿಂತೆಗೆದುಕೊಂಡ ಉಗ್ರ ಕೊಲೆಟೋಟ್ರೈಕಮ್‌ ಫಂಗಸ್‌ಗಳು ಮತ್ತೆ ಯುದ್ಧ ಘೋಷಣೆ ಮಾಡಿವೆ. ರೋಗದ ಅಟ್ಯಾಕ್ ಸ್ಟಾರ್ಟ್ ಆಗಿದೆ.

ಅಡಿಕೆ ಎಲೆ ಚುಕ್ಕಿ ಕರೋನಾಕ್ಕೆ ನಿಯಂತ್ರಣ ಮಾರ್ಗಸೂಚಿ ಏನು?

ಏನೇ ಆಗಲಿ, ಒಂದಿಷ್ಟು ಭರವಸೆ ಇಟ್ಟುಕೊಂಡು ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ ವಿಚಾರದಲ್ಲಿ ರೈತರೇ ಅನುಭವದ ಔಷಧೋಪಚಾರ, ಪತ್ಯ, ತೋಟದ ಸ್ವಚ್ಛತೆ, ಮಾಸ್ಕ್‌, ವ್ಯಾಕ್ಸಿನ್‌ಗಳೊಂದಿಗೆ ವಿಪತ್ತು ನಿರ್ವಹಣೆ ಬಗ್ಗೆ ಚಿಂತನೆ ಮಾಡಬೇಕಿದೆ. ಯಾವ ಸರಕಾರ, ಮಂತ್ರಿಗಳು, ವಿಜ್ಞಾನಿಗಳು, ಇಲಾಖೆಗಳು, ತಟಸ್ಥ ಕೃಷಿ ವಿವಿಗಳು ಅಡಿಕೆ ಎಲೆ ಚುಕ್ಕಿ ಸಾಂಕ್ರಾಮಿಕಕ್ಕೆ ರೈತರಿಗೆ ಅನುಕೂಲವಾಗುವ ಮತ್ತು ಸಾಧ್ಯವಾಗಬಹುದಾದ ಯಾವ ಪರಿಹಾರ, ನಿಯಂತ್ರಣ, ಮಾರ್ಗಸೂಚಿ, ಸಲಹೆ, ಮಾಹಿತಿಗಳನ್ನೂ ಕೊಡುವ ಸ್ಥಿತಿಯಲ್ಲಿ ಇಲ್ಲ, ಕೊಡುವುದೂ ಇಲ್ಲ!

ಮಲೆನಾಡಿನ ಅದರಲ್ಲೂ ಕೊಪ್ಪ, ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ ಸುತ್ತಮುತ್ತ ಅನೇಕ ಕಡೆಗಳಲ್ಲಿ ಎಲೆ ಚುಕ್ಕಿ ರೋಗ ಕಾಣಿಸುತ್ತಿರುವ ವರದಿಗಳು ಹೆಚ್ಚಾಗುತ್ತಿವೆ. ಕೆಲವು ಕಡೆ ತೇವಾಂಶ ಹೆಚ್ಚಿದ್ದರೂ, ಉಷ್ಣತೆ ಹೆಚ್ಚಿರುವ ಕಾರಣ, ರೋಗದ ತೀವ್ರತೆ ಇಲ್ಲದಿದ್ದರೂ, ಕೋವಿಡ್ 19 ರೀತಿ, ಎಲೆ ಚುಕ್ಕಿ ರೋಗ ಮಂದ ಸ್ಥಿತಿಯಿಂದ ಮತ್ತೆ ನಿಧಾನವಾಗಿ ಹರಡುತ್ತಿರುವುದು ಸತ್ಯ.

ಈ ಹಿನ್ನೆಲೆಯಲ್ಲಿ, ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಈಗಾಗಲೆ ಇರುವ ಹಳೆಯ ರೈತರ ಅನುಭವದ ಸಲಹೆ ಮಾಹಿತಿಗಳ ಮಾರ್ಗಸೂಚಿಯನ್ನೇ ಪುನಃ ಪ್ರಾರಂಭಿಸುವುದು ಒಳ್ಳೆಯದು.

  1. ಅಡಿಕೆ ಕೊಳೆರೋಗಕ್ಕೆ ಮುಂಜಾಗ್ರತೆ ಔಷಧಿಯಾಗಿ ಬಳಸುವ ಬೋರ್ಡೋ 1% ದ್ರಾವಣವನ್ನು ಸ್ಪ್ರೇ ಮಾಡುವಾಗ, ಅಡಿಕೆ ಗರಿ, ಸುಳಿಗಳಿಗೂ ಸ್ಪ್ರೇ ಮಾಡುವುದು. ಅಡಿಕೆ ಗರಿ, ಸುಳಿಗಳಿಗೆ ಬೋರ್ಡೋ ಹೊಡೆಯುವುದರಿಂದ ಸುಮಾರು 25% ಬೋರ್ಡೋ ದ್ರಾವಣ ಹೆಚ್ಚು ಬೇಕಾಗುತ್ತದೆ. ಎರಡು ಅಥವಾ ಮೂರು ಸ್ಪ್ರೇಗಳಲ್ಲೂ ಇದೇ ರೀತಿ ಗರಿ ಮತ್ತು ಸುಳಿಗಳಿಗೆ ಬೋರ್ಡೋ ಸ್ಪ್ರೇ ಮಾಡುವುದು ಉತ್ತಮ.
  2. ಕಳೆದ ವರ್ಷ ಅಕ್ಟೋಬರ್ / ನವೆಂಬರ್‌ನಲ್ಲಿ ಕೃಷಿ ಸುಣ್ಣ ಬಳಸದಿದ್ದಲ್ಲಿ, ಈಗ ಮಳೆಯ ತೀವ್ರತೆ ಇಲ್ಲದಿರುವುದರಿಂದ, ಸಾಧಾರಣ ಮತ್ತು ಭಾರಿ ಮಳೆ ಇಲ್ಲದಿದ್ದಲ್ಲಿ (ಹವಾಮಾನ ವರದಿ ಆಧರಿಸಿ), ತಕ್ಷಣ ಅಡಿಕೆ ತೋಟಕ್ಕೆ ಕೃಷಿ ಸುಣ್ಣ ಹಾಕಬಹುದು. ಎಕರೆಗೆ 5-7 ಕ್ವಿಂಟಾಲ್‌ನಷ್ಟು ಕೃಷಿ ಸುಣ್ಣ ಹಾಕಬಹುದು. ಮಳೆ ಹೆಚ್ಚಿದ್ದು, ಈಗ ಕೊಡುವುದು ಕಷ್ಟವಾದರೆ, ಮಳೆಗಾಲ ಮುಗಿದ ಕೂಡಲೆ (ಸೆಪ್ಟೆಂಬರ್/ಅಕ್ಟೋಬರ್) ಕೃಷಿ ಸುಣ್ಣ ಕೊಡಬಹುದು. ಮಣ್ಣಿನ pH ಆ್ಯಸಿಡಿಕ್ (ಆಮ್ಲೀಯ) ನಿಯಂತ್ರಣದಿಂದ ಸ್ವಲ್ಪ ಮಟ್ಟಿನ ಎಲೆ ಚುಕ್ಕಿ ರೋಗ ನಿಯಂತ್ರಣ ಸಾಧ್ಯ.
  3. ಅಡಿಕೆ ತೋಟಕ್ಕೆ AMC ಟ್ರೈಕೋಡರ್ಮಾ, ಸ್ಯುಡೋಮಾನಸ್‌ಗಳನ್ನು ಕೊಡುವುದು. AMC, ಟ್ರೈಕೋಡರ್ಮಾ, ಜ್ಯುಡೋಮಾನಸ್‌ಗಳು ಫಂಗಿಸೈಡ್ ಆಗಿಯೂ ಕೆಲಸ ಮಾಡುವುದರಿಂದ, ಅಡಿಕೆ ಮರಗಳಿಗೆ ಪೋಷಕಾಂಶಗಳನ್ನು ಪಡೆದು ಸದೃಡವಾಗುವುದಕ್ಕೂ ಇವುಗಳು ಸಹಕಾರಿಯಾಗುವುದು. ಇದನ್ನು ಈಗ ಕೊಡುವುದು ಕಷ್ಟವಾದಲ್ಲಿ, ಸೆಪ್ಟೆಂಬರ್‌ /ಅಕ್ಟೋಬರ್‌ನಲ್ಲಿ ಕೊಡುವುದಕ್ಕೆ ಸಿದ್ಧವಾಗುವುದು.
  4. ಉಳಿದಂತೆ, ತೋಟದಲ್ಲಿ ನೀರು ನಿಲ್ಲದಂತೆ, ತೋಟಗಳಲ್ಲಿ ದನ ಕರುಗಳು ತಿರುಗಾಡಿ ಗೊಚ್ಚೆ ಮಾಡದಂತೆ, ಕಾಡುಕೋಣಗಳು ಈಗಾಗಲೆ ಮಾಡಿಟ್ಟ ಗುಂಡಿಗಳನ್ನು ಮುಚ್ಚುವ, ಕಪ್ಪು ಹೆರೆಯುವ, ತೋಟದಲ್ಲಿ ಅಡಿಕೆ ಹಾಳೆಯಲ್ಲಿ ನೀರು ನಿಲ್ಲದಂತೆ ಮಾಡುವ….. ಮುಂತಾದ ಮಾಮೂಲಿ ಕ್ರಮಗಳನ್ನು ಕೈಗೊಳ್ಳುವುದು ಒಂದು ಹಂತದ ಎಲೆ ಚುಕ್ಕಿ ರೋಗದ ನಿಯಂತ್ರಣಕ್ಕೂ ಸಹಕಾರಿ. (ಇತರ ನಿಯಂತ್ರಣ ಮಾರ್ಗಸೂಚಿಗಳಿದ್ದರೆ ರೈತರು ಹಂಚಿಕೊಳ್ಳಬಹುದು)

ಈ ಸುದ್ದಿಯನ್ನೂ ಓದಿ | Areca nut problem: ಅಡಿಕೆ ಬೆಳೆಗಾರರ ಮೇಲೆ ಇ-ವೇ ಬಿಲ್ ಪ್ರಹಾರ!

ಕಳೆದ ಕ್ರೋಧಿ ಸಂವತ್ಸರದಲ್ಲಿ, ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದಿಂದ 20% ಟು 50% ಫಸಲು ನಾಶ ಆಗಿದೆ. ಇನ್ನು ಈಗಿನ ವಿಶ್ವಾವಸು ವರ್ಷದಲ್ಲಿ ಭವಿಷ್ಯ ಏನೋ ಗೊತ್ತಿಲ್ಲ. ಆದರೂ, ಕರೋನಾ ಸಾಂಕ್ರಾಮಿಕಕ್ಕೆ ಹೇಳಿದಂತೆ, ಅಡಿಕೆ ಎಲೆ ಚುಕ್ಕಿ ರೋಗಕ್ಕೂ ಹೇಳುವುದಾದರೆ… ಆತಂಕ ಬೇಡ, ಜಾಗ್ರತೆ ವಹಿಸೋಣ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »