ಅಶ್ವತ್ಥಕಟ್ಟೆ
ranjith.hoskere@gmail.com
ವಿಶ್ವ ಕ್ರಿಕೆಟ್‌ನ ‘ಆಯಾಮ’ವನ್ನು ಬದಲಾಯಿಸಿದ, ಕ್ರಿಕೆಟ್ ಕ್ರೇಜ್ ಕಡಿಮೆಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ ಪರಿಚಯವಾಗಿದ್ದೇ ಐಪಿಎಲ್. ಬಿಸಿಸಿಐ ಆರಂಭಿಸಿದ ಐಪಿಎಲ್‌ಗೆ ಎಷ್ಟು ಪ್ರಾಯವೋ ಅಷ್ಟೇ ಪ್ರಾಯ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಅಭಿಮಾನಿಗಳ ಇಎಸ್ ಸಿಎನ್ ಅರ್ಥಾತ್ ‘ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆಗೆ. ವಿಜಯ್ ಮಲ್ಯ ಒಡೆತನದಲ್ಲಿರುವ ಆರ್‌ಸಿಬಿ ಆರಂಭ ದಿಂದಲೂ ‘ಪೇಪರ್’ನಲ್ಲಿ ಬಲಿಷ್ಠವಾಗಿದ್ದರೂ 7 ವರ್ಷದಲ್ಲಿ ಒಮ್ಮೆಯೂ ಕಪ್ ಗೆಲ್ಲಲಾಗಿರಲಿಲ್ಲ.
ಪ್ರತಿ ವರ್ಷ ಐಪಿಎಲ್ ಆರಂಭದಲ್ಲಿ ಇರುತ್ತಿದ್ದ ‘ಇಎಸ್‌ಸಿಎನ್’ ಹ್ಯಾಷ್ ಟ್ಯಾಗ್ ಟೂರ್ನಿ ಮುಗಿಯುವ ವೇಳೆಗೆ ಮುಂದಿನ ಸಲ ಕಪ್ ನಮ್ದೇ ಆಗಿ ಹೋಗುತ್ತಿತ್ತು. ಐಪಿಎಲ್‌ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನದಲ್ಲಿಯೇ ಆರ್‌ಸಿಬಿ ಕೂತರೂ, ಟ್ರೋಫಿಯ ವಿಷಯಕ್ಕೆ ಬಂದಾಗ ಮಾತ್ರ ಕಣ್ಣಿಗೆ ಕಾಣಿಸದಷ್ಟು ಕೆಳಗೆ ಇರುತ್ತಿತ್ತು.
18ನೇ ಆವೃತ್ತಿಯ ಆರಂಭದಲ್ಲಿಯೂ ‘ಇಎಸ್‌ಸಿಎನ್’ ಎನ್ನುವ ಮಹದಾಸೆಯೊಂದಿಗೆ ಆರ್‌ಸಿಬಿ ತನ್ನ ಆವೃತ್ತಿಯನ್ನು ಆರಂಭಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಹೊರತಾಗಿ ಉಳಿದೆಲ್ಲ ಕಡೆ ಉತ್ತಮ ಪ್ರದರ್ಶನ ನೀಡಿ ಕೊನೆಗೂ ‘ಕಪ್ ನಮ್ದೇ’ ಎನ್ನುವ ಘೋಷಣೆಯನ್ನು ಮಾಡಿದ್ದಾಯಿತು. ಆರ್ ಸಿಬಿಯ ಈ ಗೆಲುವಿನ ಕ್ಷಣವನ್ನು ಕೇವಲ ಕರ್ನಾಟಕ ಮಾತ್ರವಲ್ಲದೇ, ವಿಶ್ವಾದ್ಯಂತ ಇರುವ ಅಭಿಮಾನಿಗಳು ಸಂಭ್ರಮಿಸಿದರು.
ಕೇವಲ ಆರ್‌ಸಿಬಿ ಅಭಿಮಾನಿಗಳಷ್ಟೇ ಅಲ್ಲದೇ, ಇತರೆ ತಂಡದ ಅಭಿಮಾನಿಗಳು ಕೊನೆಗೂ ಇವರ ಆಸೆ ಈಡೇರಿತು ಎನ್ನುವ ಮನಸ್ಥಿತಿಯಲ್ಲಿ ಖುಷಿಪಟ್ಟರು. ಆದರೆ ಇಷ್ಟೇ ಆಗಿದ್ದರೆ ಇದು ಅಂಕಣದ ವಿಷಯವೇ ಆಗಿರುತ್ತಿರಲಿಲ್ಲ.
18 ವರ್ಷದ ಬಳಿಕ ಗೆದ್ದ ಟ್ರೋಫಿಯ ಸಂಭ್ರಮದ ನೆಪದಲ್ಲಿ ಫ್ರಾಂಚೈಸಿ, ಸರಕಾರ ಹಾಗೂ ಅಭಿಮಾನಿಗಳ ಅತಿರೇಕದ ವರ್ತನೆಗಳು, ಸಂಭ್ರಮವನ್ನು 18 ದಿನ ಹೋಗಲಿ 18 ತಾಸು ಉಳಿಸ ಲಿಲ್ಲ. ಹೌದು, ಪಂಜಾಬ್ ವಿರುದ್ಧ ಅಹಮದಾಬಾದ್ ನಲ್ಲಿ ಆರ್‌ಸಿಬಿ ಗೆಲ್ಲುತ್ತಿದ್ದಂತೆ, ಇತ್ತ ಅಭಿಮಾನಿಗಳ ಸಂಭ್ರಮಾಚರಣೆಯ ಕಟ್ಟೆ ಒಡೆದಿತ್ತು.
ಅತಿರೇಕದ ಅಭಿಮಾನದಿಂದ ಪಂದ್ಯ ಮುಗಿದ ರಾತ್ರಿಯೇ ಅನೇಕರು ಅಪಘಾತ, ರೋಡ್ ರೇಜ್‌ನಂತಹ ಕಾರಣಗಳಿಗೆ ಕೊನೆಯುಸಿರು ಎಳೆದಿದ್ದರು. ಈ ಎಲ್ಲ ನಡೆದ ಬಳಿಕವೂ, ಆರ್ ಸಿಬಿ ಬೆಂಗಳೂರಿನಲ್ಲಿ ವಿಜಯೋತ್ಸವದ ಪರೇಡ್ ಅನ್ನು ತರಾತುರಿಯಲ್ಲಿ ಆಯೋಜಿಸಿತ್ತು. ಇದರ ಬೆನ್ನಲ್ಲೇ, ರಾಜ್ಯ ಸರಕಾರ ತಮ್ಮಿಂದಲೂ ಆರ್‌ಸಿಬಿ ಆಟಗಾರರಿಗೆ ಅಧಿಕೃತ ಸನ್ಮಾನ ಕಾರ್ಯಕ್ರಮ ನಡೆಸಲು ಮುಂದಾಗಿತ್ತು (ಸರಕಾರದ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಒತ್ತಡ ಹೇರಿದ್ದವರು ಈಗಾಗಲೇ ಅಽಕಾರ ಕಳೆದುಕೊಂಡಿದ್ದಾರೆ ಎನ್ನುವುದು ಬೇರೆ ಮಾತು).
ಪಂದ್ಯಾವಳಿಯ ಆರಂಭಕ್ಕೂ ಮೊದಲೇ ಆರ್‌ಸಿಬಿ ಹಾಗೂ ಕೆಎಸ್‌ಸಿಎ ವಿಜಯೋತ್ಸವ ಪರೇಡ್‌ಗೆ ಅನುಮತಿ ಕೇಳಿದ್ದರಂತೆ. ಇದಕ್ಕೆ ‘ಮ್ಯಾಚ್ ಫಿಕ್ಸಿಂಗ್’ ಬಣ್ಣವನ್ನು ಕಟ್ಟಲಾಗುತ್ತಿದೆ. ಆದರೆ ಪಂದ್ಯ ಗೆದ್ದ ಮರುದಿನವೇ ವಿಜಯೋತ್ಸವ ಮಾಡಿದರೆ ಎಲ್ಲ ಆಟಗಾರರು ಲಭ್ಯರಿರುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿ ಈ ಆತುರದ ತೀರ್ಮಾನ ವನ್ನು ಆರ್‌ಸಿಬಿ ಕೈಗೊಂಡಿರಬಹುದು.
ಆರಂಭದಲ್ಲಿ ಅನುಮತಿ ನೀಡದಿದ್ದರೂ, ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ.ಗೋವಿಂದರಾಜು ಅವರ ‘ಅತ್ಯುತ್ಸಾಹ’ ದಿಂದ ಒಲ್ಲದ ಮನಸ್ಸಿನಿಂದ ಪೊಲೀಸರು ಅನುಮತಿ ಕೊಟ್ಟಿದ್ದು, ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ 10ಪಟ್ಟು ಮಂದಿ ಸೇರಿದ್ದು, ಇದರಿಂದಾಗಿ ಶುರುವಾದ ಕಾಲ್ತುಳಿತ ದಲ್ಲಿ 11 ಮಂದಿ ಸತ್ತಿದ್ದು ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯ.
ಪೊಲೀಸರ ತೀವ್ರ ವಿರೋಧ ಹೊರತಾಗಿಯೂ ಕಾರ್ಯಕ್ರಮದ ಬಗ್ಗೆ ಆಸಕ್ತಿ ವಹಿಸಲು ಅವರವರ ಕಾರಣಗಳಿರುವುದಂತೂ ಸ್ಪಷ್ಟ. ಹೌದು, ಮೊದಲಿಗೆ ಪೊಲೀಸರ ಸ್ಪಷ್ಟ ನಿರಾಕರಣೆಯ ಹೊರತಾಗಿಯೂ ಆರ್‌ಸಿಬಿ ವಿಜಯೋತ್ಸವ ಪರೇಡ್ ನಡೆಸ ಬೇಕು ಎಂದು ಫ್ರಾಂಚೈಸಿ ಹಾಗೂ ಕೆಎಸ್‌ಸಿಎ ತೀರ್ಮಾನಿಸಿದ್ದರಿಂದ ಹಿಂದೆ ‘ಟಿಆರ್‌ಪಿ’ ಇರುವುದು ಸ್ಪಷ್ಟ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುತ್ತಾರೆ, ಲೈವ್ ನೋಡುತ್ತಾರೆ.
ಈ ಲೈವ್‌ನಲ್ಲಿನ ಜಾಹೀರಾತುಗಳಿಂದ ಇನ್ನಷ್ಟು ‘ಲಾಭ’ ಮಾಡಿಕೊಳ್ಳುವುದು ಆರ್‌ಸಿಬಿಯ ಉದ್ದೇಶವಾಗಿತ್ತು. ಇನ್ನು ಪಂದ್ಯದ ಮರುದಿನವೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಹಿಂದಿನ ಮತ್ತೊಂದು ಕಾರಣವೆಂದರೆ, ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ವಿದೇಶಿ ಆಟಗಾರ ರಾದ ಫಿಲ್ ಸಾಲ್ಟ್, ಟಿಮ್ ಡೇವಿಡ್, ಹ್ಯಾಜಲ್‌ವುಡ್ ಸೇರಿದಂತೆ ಅನೇಕರು ಬೆಂಗಳೂರಿಗೆ ವಾಪಸಾಗುತ್ತಿದ್ದಂತೆ ಮರುದಿನವೇ ಹೊರಡುವ ಆಲೋಚನೆಯಲ್ಲಿದ್ದರು. ಈ ಎಲ್ಲ ಆಟಗಾರರು ಹೊರಟು ಹೋದರೆ ತಮಗೆ ಸಿಗಬೇಕಾಗಿರುವ ‘ಟಿಆರ್‌ಪಿ’ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಪೊಲೀಸರ ವಿರೋಧವನ್ನು ಹಾಕಿಕೊಂಡು, ಸರಕಾರದ ಮೂಲಕವೇ ಸೂಚನೆ ಕೊಡಿಸಿ ಕಾರ್ಯಕ್ರಮ ಆಯೋಜಿಸಿದರು.
ಇನ್ನು ಫ್ರಾಂಚೈಸಿ ತಂಡವೊಂದು ಗೆಲುವು ಸಾಧಿಸಿದಕ್ಕೆ ಸರಕಾರ ವಿಧಾನಸೌಧದ ಭವ್ಯ ಮೆಟ್ಟಿಲು ಗಳ ಮೇಲೆ ಅಧಿಕೃತ ಕಾರ್ಯಕ್ರಮ ಆಯೋಜಿಸಿದ್ದಾದರೂ ಏಕೆ? ಅದಕ್ಕೆ ಎಲ್ಲ ಶಿಷ್ಠಾಚಾರಗಳನ್ನು ಬದಿಗೊತ್ತಿ ರಾಜ್ಯಪಾಲರನ್ನು ಆಹ್ವಾನಿಸಿದ್ದೇಕೆ ಎನ್ನುವ ಪ್ರಶ್ನೆ ಬರುವುದು ಸಹಜ.
ಇದಕ್ಕೆ ಸರಳ ಉತ್ತರ, ‘ಗೋವಿಂದರಾಜು ಅವರ ಅತ್ಯುತ್ಸಾಹ’ ಎನ್ನುವುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಲ್ಲದ ಮನಸ್ಸಿನಿಂದಲೇ ಕಾರ್ಯಕ್ರಮಕ್ಕೆ ಒಪ್ಪಿಸಿ, ಸಿದ್ದರಾಮಯ್ಯ ಅವರು ಕರೆದಿದ್ದಾರೆಂದು ರಾಜ್ಯಪಾಲರನ್ನು ಒಪ್ಪಿಸಿ, ಸರಕಾರ ಕರೆದಿದೆ ಎಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅನ್ನು ಒಪ್ಪಿಸಿದ್ದು ಗೋವಿಂದರಾಜು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಈ ಎಲ್ಲ ಪ್ರಹಸನದ ನಡುವೆ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ಸುರಕ್ಷತಾ ದೃಷ್ಠಿಯಿಂದ ಕಾರ್ಯಕ್ರಮ ಮುಂದೂಡುವುದು ಸೂಕ್ತವೆಂದು ಗೋವಿಂದ ರಾಜು ಅವರಿಗೆ ನೀಡಿದ ಸಲಹೆಯನ್ನು ಮುಖ್ಯಮಂತ್ರಿಗಳ ಕಿವಿಗೆ ಬೀಳದಂತೆ ನೋಡಿ ಕೊಂಡರು.
ಈ ಎಲ್ಲದರ ಪರಿಣಾಮ, ವಿಧಾನಸೌಧಕ್ಕೆ ಭದ್ರತೆ ಕೊಡುವ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ ವನ್ನು ಪೊಲೀಸರು ಮರೆತರು. ವಿಧಾನಸೌಧದಲ್ಲಿ ಕಾಲ್ತುಳಿತ ವಾಗದಿದ್ದರೂ, ನೂಕುನುಗ್ಗಲು ಆಗಿರುವುದು ಸ್ಪಷ್ಟ. ಈ ಕಾಲ್ತುಳಿತದ ಬೆನ್ನಲ್ಲೇ ಒಬ್ಬೊಬ್ಬರದ್ದು ಒಂದೊಂದು ವಾದ ಶುರು ವಾಯಿತು. ಅದರಲ್ಲಿಯೂ ಆರಂಭದಲ್ಲಿ ವಿಜಯೋತ್ಸವಕ್ಕೆ ಅನುಮತಿ ನೀಡದ ಪೊಲೀಸರ ನಡೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ರೋಷಾವೇಶ ಪ್ರದರ್ಶನ ಮಾಡಿದ್ದ ಬಿಜೆಪಿ-ಜೆಡಿಎಸ್ ಇವರು, ಅನುಮತಿ ಕೊಟ್ಟಿದ್ದು ಏಕೆ ಎನ್ನುವ ಪ್ರಶ್ನೆಯನ್ನು ಶುರು ಮಾಡಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೇಳುತ್ತಿರುವ ಬಿಜೆಪಿ ಗರಿಗೆ, ಇಡೀ ಪ್ರಕರಣದಲ್ಲಿ ಆರ್‌ಸಿಬಿ ಹಾಗೂ ಕೆಎಸ್‌ಸಿಎ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಏಕೆಂದರೆ, ಕೆಎಸ್‌ಸಿಎ, ಆರ್ ಸಿಬಿ ಅಥವಾ ಬಿಸಿಸಿಐ ಅನ್ನು ಟೀಕಿಸಿದರೆ ಅದೆಲ್ಲಿ ಗೃಹ ಸಚಿವ ಅಮಿತ್ ಶಾ ‘ಪುತ್ರ’ನಿಗೆ ಬೇಸರವಾಗುವುದೋ ಎನ್ನುವ ಆತಂಕದಲ್ಲಿಯೇ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕೆಎಸ್‌ಸಿಎ ತಮ್ಮದೇನಿದ್ದರೂ ಕರ್ನಾಟಕದಲ್ಲಿ ಕ್ರಿಕೆಟ್ ಬೆಳವಣಿಗೆ ಬಗ್ಗೆ ಪರಿಶೀಲನೆ ನಡೆಸುವುದೇ ಹೊರತು, ಸುರಕ್ಷತೆಯ ವಿಷಯಕ್ಕೂ ಸಂಬಂಧವಿಲ್ಲ. ಚಿನ್ನಸ್ವಾಮಿ ಗೇಟ್ ಬಳಿ ಜನದಟ್ಟಣೆ ನಿರ್ವಹಣೆ ಪೊಲೀಸರು ವಿಫಲರಾಗಿದ್ದಾರೆ ಎನ್ನುವ ಮೂಲಕ ತಮಗೂ ಕಾಲ್ತುಳಿತಕ್ಕೂ ಸಂಬಂಧವಿಲ್ಲ.
ಆದರೂ, ಮೃತರಿಗೆ 5 ಲಕ್ಷ ಪರಿಹಾರ ಘೋಷಿಸಿ ಕೈತೊಳೆದುಕೊಂಡಿದೆ. ಇನ್ನು ಟ್ರೋಫಿ ಗೆದ್ದ ಹುಮ್ಮಸ್ಸಿನಲ್ಲಿ ಪೊಲೀಸರ ಮಾತು ಕೇಳದೇ ವಿಜಯೋತ್ಸವ ಆಯೋಜಿಸಿದ್ದ ಆರ್‌ಸಿಬಿ ಸತ್ತವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿದೆ. ಆದರೆ ನಮಗೂ ಕಾಲ್ತುಳಿತಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಆರ್‌ಸಿಬಿ ಫ್ರಾಂಚೈಸಿ ತಂಡವಾಗಿದ್ದು, ಪ್ರತ್ಯೇಕ ಭದ್ರತಾ ಪಡೆಗಳಿಲ್ಲ. ಆದ್ದರಿಂದ ವಿಜಯೋತ್ಸವದ ವೇಳೆ ಭದ್ರತೆ ನೀಡಬೇಕಿರುವುದು ರಾಜ್ಯ ಸರಕಾರ ಕರ್ತವ್ಯ. ಇನ್ನು ವಿಧಾನಸೌಧದ ಬಳಿ ವಿಜಯೋ ತ್ಸವಕ್ಕೆ ನಾವು ಕೇಳಿರಲಿಲ್ಲ, ಸರಕಾರದ ನಿರ್ಧಾರ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವುದು ಸರಕಾರದ ಕರ್ತವ್ಯ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಮಗೂ ಈ ಇಡೀ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಜಾರಿಗೊಂಡಿದೆ.
ಸರಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಆಗಿರುವುದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂದು ಜಾರಿಗೊಂಡಿದೆ. ಈ ಎಲ್ಲದರ ನಡುವೆ ಅತಿರೇಕ ಅಭಿಮಾನ ತೋರಿಸಲು ಹೋಗಿದ್ದೇ 11 ಜನರ ಸಾವಿಗೆ ಪ್ರಮುಖ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.
ದೀರ್ಘಕಾಲದ ಕಾಯುವಿಕೆಯ ಬಳಿಕ ಆರ್‌ಸಿಬಿ ಮಡಿಲಿಗೆ ಕಪ್ ಬಂದಿರುವುದು ಸಹಜವಾಗಿಯೇ ಎಲ್ಲರಿಗೂ ಖುಷಿ ಕೊಟ್ಟಿದೆ. ಹಾಗೆಂದ ಮಾತ್ರಕ್ಕೆ 35 ಸಾವಿರ ಸಾಮರ್ಥ್ಯವಿರುವ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಒಂದುವರೆ ಲಕ್ಷ ನುಗ್ಗಲು ಪ್ರಯುತ್ನಿಸಿದರೆ ಏನಾಗಬಹುದು ಎನ್ನುವ ಸಾಮಾನ್ಯ ಪ್ರಜ್ಞೆಯಿಲ್ಲದೇ ನುಗ್ಗಲು ಪ್ರಯತ್ನಿಸಿದ್ದಕ್ಕೆ ಯಾರು ಹೊಣೆ.
ಅಭಿಮಾನವನ್ನು ತೋರುವ ಸಮಯದಲ್ಲಿ, ತಮ್ಮ ಜೀವಕ್ಕೆ ತಾವೇ ಗ್ಯಾರಂಟಿ ಎನ್ನುವುದನ್ನು ಮರೆತಿದ್ದು ಸಾರ್ವಜನಿಕರ ತಪ್ಪಲ್ಲವೇ? ಎನ್ನುವುದಕ್ಕೆ ಉತ್ತರವಿಲ್ಲ. ಹಾಗೇ ನೋಡಿದರೆ, ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟಿರುವ ಘಟನೆ ಕ್ರೀಡಾ ಜಗತ್ತಿಗೆ ಹೊಸದೇನಲ್ಲ. ಕ್ರೀಡೆಯ ಸಂಭ್ರಮಾಚರಣೆ ಅಥವಾ ಫೈನಲ್ ಪಂದ್ಯಾವಳಿಯಲ್ಲಿನ ವಿವಾದಗಳಿಗೆ ಸುಮಾರು 10ಕ್ಕೂ ಹೆಚ್ಚು ಕಾಲ್ತುಳಿತ ಪ್ರಕರಣಗಳು ಜಗತ್ತಿನಲ್ಲಿ ದಾಖಲಾಗಿದೆ. ಆದರೆ ಈ ಎಲ್ಲ ಕಾಲ್ತುಳಿತ ಗಳೂ, ಫುಟ್‌ಬಾಲ್ ಕ್ರೀಡೆಯಲ್ಲಿಯೇ ಆಗಿರುವುದು.
ಈ ಹಿಂದೆ ಭಾರತ-ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯಾವಳಿಯ ವೇಳೆ ಅಭಿಮಾನಿಗಳು ಬಾಟಲ್ ತೂರಿದ್ದು ಅಥವಾ 1996ರ ವಿಶ್ವಕಪ್ ಸೆಮೀಸ್‌ನಲ್ಲಿ ಕ್ರೀಡಾಂಗಣದಲ್ಲಿ ಬೆಂಕಿ ಹಾಕಿದ ಘಟನೆಗಳಿಗೆ ಭಾರತದ ಕ್ರಿಕೆಟ್ ಇತಿಹಾಸ ಸಾಕ್ಷಿಯಾಗಿದೆ. ಇನ್ನು ಪಾಕಿಸ್ತಾನದಲ್ಲಿ ಪಾಕಿಸ್ತಾನ-ಶ್ರೀಲಂಕಾ ಪಂದ್ಯದ ವೇಳೆ ಉಗ್ರರ ದಾಳಿಯಾಗಿರುವ ಇತಿಹಾಸವಿದೆ.
ಆದರೆ ಕಾಲ್ತುಳಿತದಂತಹ ಘಟನೆಗಳು ವಿಶ್ವಾದ್ಯಂತ ಎಲ್ಲಿಯೂ ನಡೆದಿರಲಿಲ್ಲ. ಆಟಗಾರರ ನಡುವಿನ ಸ್ಲೆಡ್ಜಿಂಗ್ ಅಥವಾ ಅಭಿಮಾನಿಗಳ ‘ಟೀಕೆ’ಗಳನ್ನೇ ಅರಗಿಸಿಕೊಳ್ಳದ ಜೆಂಟಲ್‌ಮ್ಯಾನ್ ಗೇಮ್ ಎನಿಸಿಕೊಳ್ಳುವ ಕ್ರಿಕೆಟ್ ಜಗತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಈ ಕಾಲ್ತುಳಿತವನ್ನು ನಿರೀಕ್ಷೆ ಮಾಡಿರಲಿಲ್ಲ.
ಆದರೆ 18 ವರ್ಷದ ಟ್ರೋಫಿ ಕಾಯುವಿಕೆಯ ಬಳಿಕ ನೆಚ್ಚಿನ ತಂಡಕ್ಕೆ ಟ್ರೋಫಿ ಸಿಕ್ಕಿದ್ದಾಗ ಅಭಿಮಾನಿಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ಸರಕಾರ, ಫ್ರಾಂಚೈಸಿ ಹಾಗೂ ಕೆಎಸ್‌ಸಿಎ ಯೋಚಿಸಬಹುದಾಗಿತ್ತು. ಈ ವಿಜಯೋತ್ಸವನ್ನು ಆಚರಿಸುವ ಮೊದಲೇ, ಅಹಮದಾಬಾದ್ ನಲ್ಲಿ ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆ, ಬೆಂಗಳೂರಿನಲ್ಲಿ ಮುಂಜಾನೆವರೆಗೆ ಅಭಿಮಾನಿಗಳ ‘ಅತಿರೇಕ’ದ ಆಚರಣೆಯನ್ನು ನೋಡಿಯಾದರೂ ಎಚ್ಚೆತ್ತುಕೊಂಡು ‘ಸಾವಕಾಶ’ ವಾಗಿ ವಿಜಯೋತ್ಸವ ಆಚರಿಬಹುದಾಗಿತ್ತು.
ಆದರೆ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಆಲೋಚನೆ ಮಾಡಿ, ಕಾಲ್ತುಳಿತದಲ್ಲಿ ಮಂದಿ ಕೊನೆಯುಸಿರು ಎಳೆಯುವಂತಾಗಿದೆ. ಯಾವ ಉದ್ದೇಶಕ್ಕಾಗಿ ಅತಿರೇಕದ ಉತ್ಸಾಹವನ್ನು ಅಭಿಮಾನಿಗಳು, ಸರಕಾರ ಹಾಗೂ ಫ್ರಾಂಚೈಸಿ ಮಾಡಿತ್ತೋ, ಇದೀಗ ಆ ಟ್ರೋಫಿ ಗೆದ್ದ ಖುಷಿಯೇ ಉಳಿಯಲು ಬಿಡಲಿಲ್ಲ ಎನ್ನುವುದು ವಾಸ್ತವ. 18 ವರ್ಷ ಟ್ರೋಫಿಗಾಗಿ ಕಾದು, ಅದರ ಸಂಭ್ರಮ ವನ್ನು 18 ತಾಸು ಉಳಿಸಿಕೊಳ್ಳಲಿಲ್ಲ ಎನ್ನುವುದೇ ಆರ್‌ಸಿಬಿಯ ದುರಂತ!