ದೇವೇಂದ್ರ ಜಾಡಿ ಕಲಬುರಗಿ
8 ತೊಗರಿ ನಾಡಿನ ರಾಜಕೀಯ ನಾಯಕರ ಪ್ರತಿಷ್ಠೆ
ಕಲಬುರಗಿಗೆ ಬೇಕು ರೈಲ್ವೆ ವಿಭಾಗೀಯ ಕೇಂದ್ರ
ಈಡೇರುತ್ತಿಲ್ಲ ಈ ಭಾಗದ ಜನರ ದಶಕಗಳ ಬೇಡಿಕೆ
ಕೇಂದ್ರ ಬಿಜೆಪಿ ಸರಕಾರದ ಅಲಕ್ಷ್ಯಕ್ಕೆ ಜನಾಕ್ರೋಶ
ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವೆಂದರೆ ಕಲಬುರಗಿ. ಇಲ್ಲೊಂದು ರೈಲ್ವೆ ಡಿವಿಜನ್ ಆಗಬೇಕು ಎನ್ನುವುದು ದಶಕಗಳ ಬೇಡಿಕೆ. ಆದರೆ ಇಲ್ಲಿ ವಿಭಾಗೀಯ ರೈಲ್ವೆ ಕೇಂದ್ರ ಕಚೇರಿ ಸ್ಥಾಪನೆ ಮಾಡುವ ವಿಚಾರ ರಾಜಕೀಯ ನಾಯಕರ ಕ್ರೆಡಿಟ್ ಪೋಲಿಟಿಕ್ಸ್ ನಿಂದಾಗಿ ಈ ಭಾಗದ ಜನರ ಬಹುದಿನದ ಬೇಡಿಕೆ ನೆನೆಗುದಿಗೆ ಬಿದ್ದಿದೆ.
1984ರಲ್ಲಿ ನ್ಯಾ.ಸರಿನ್ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದಾಗಿನಿಂದ ಈ ಬೇಡಿಕೆಯಿದ್ದರೂ ಸರಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಅಂದಿನ ಯುಪಿಎ-2 ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು 2013ರಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರಕ್ಕೆ ಮಂಜೂರು, ಮಾಡಿ, 2014ರಲ್ಲಿ ಶಂಕು ಸ್ಥಾಪನೆ ಸಹ ನೆರವೇರಿಸಿದರು. ಬಳಿಕ ಬಂದ ಎನ್.ಡಿ.ಎ ಸರಕಾರ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಮಾತ್ರ ಮನಸ್ಸು ಮಾಡು ತ್ತಿಲ್ಲ.
ಅನುಮತಿಗೆ ದಶಕ: ಅನುಮತಿ ದೊರೆತು ದಶಕವೇ ಗತಿಸಿದೆ. ಆದರೆ ಈ ಕೆಲಸಕ್ಕೆ ಕೇಂದ್ರ ಸರಕಾರ ಕೈಹಾಕದೆ ಇರುವುದು ನೋಡಿದರೆ, ಈ ಭಾಗದ ಬಹುದೊಡ್ಡ ಕೆಲಸವೊಂದನ್ನು ಮಕಾಡೇ ಮಲಗಿ ಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಲಬುರಗಿ ಯಲ್ಲಿ ರೈಲ್ವೆ ಡಿವಿಷನ್ ಆಗಬೇಕು ಎಂಬುದು 40 ವರ್ಷಗಳಿಂದ ಬೇಡಿಕೆಯಾಗಿದೆ. 1984ರಲ್ಲಿ ನ್ಯಾ. ಸರಿನ್ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದಾಗಿನಿಂದ ಈ ಬೇಡಿಕೆಯಿದ್ದು, ನಂತರ 2014ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮಂಜೂರು ಮಾಡಿದ್ದರು.
ಇದನ್ನೂ ಓದಿ: Kalaburagi Murder Case: ನಜಮುದ್ದೀನ್ ಕೊಲೆ ಪ್ರಕರಣ; 24 ಗಂಟೆಯಲ್ಲೇ ಆರು ಆರೋಪಿಗಳ ಹೆಡೆಮುರಿಕಟ್ಟಿದ ಖಾಕಿ
2017ರಲ್ಲಿ ಕೇಂದ್ರ ಸರಕಾರ ಕರ್ನಾಟಕದ ಕಲಬುರಗಿ, ಜಮ್ಮು ಕಾಶ್ಮೀರ ಹಾಗೂ ಅಸ್ಸಾಂನ ಸಿಲ್ಚರ್ ರೈಲ್ವೆ ವಿಭಾಗೀಯ ಕೇಂದ್ರಗಳ ಆರಂಭಕ್ಕೆ ಆಡಳಿತಾತ್ಮಕ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ನಂತರ ಎಎಜಿ ಕಮಿಟಿ ಸಿಲ್ಚರ್ ಬೇಡಿಕೆ ಕೈಬಿಟ್ಟಿದ್ದು ಬಿಟ್ಟರೆ ಜಮ್ಮು, ಕಲಬುರಗಿ ಡಿವಿಷನ್ ಮುಂದುವರಿಸಿದ್ದವು.
ರಾಜಕೀಯ ಕ್ರೆಡಿಟ್ ವಾರ್ : ಆದರೆ, ಕೇಂದ್ರ ಸರಕಾರ ಪ್ರತಿ ವರ್ಷ ಹಣ ಮೀಸಲಿಟ್ಟು ನಿರ್ಲಕ್ಷ್ಯ ಧೋರಣೆ ಮುಂದುವರಿಸುತ್ತಿದೆ. ಜಮ್ಮು ಕಾಶ್ಮೀರ ಕಾರ್ಯ ಪೂರ್ಣಗೊಳಿಸಿ, ಕಲಬುರಗಿ ರೈಲ್ವೆ ಡಿವಿಷನ್‌ಗೆ ಮಾತ್ರ ನಿರ್ಲಕ್ಷ್ಯ ಏಕೆ? ಇದನ್ನು ಗಮನಿಸಿದರೆ ರಾಜಕೀಯ ಪಕ್ಷಗಳ ಕ್ರೆಡಿಟ್ ವಾರ್ ನಿಂದಾಗಿ ಕಲ್ಯಾಣ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರಕಾರ ತಿಲಾಂಜಲಿ ಇಡಲು ಹೊರಟಂತಿದೆ.
ಕನ್ನಡಿಗ ರೈಲ್ವೇ ಸಚಿವ : ಕಳೆದ ವಾರ ರೇಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ ವಿ.ಸೋಮಣ್ಣ, ಕಲಬುರಗಿಗೆ ರೈಲ್ವೆ ವಿಭಾಗೀಯ ಕೇಂದ್ರ ಕಚೇರಿ ನೀಡುವುದು ಕಷ್ಟದ ಸಂಗತಿ, ನಮಗೂ ಇಲ್ಲಿ ವಿಭಾಗೀಯ ಕಚೇರಿ ಆಗಬೇಕು ಎನ್ನುವ ಅಸೆಯಿದೆ. ಆದರೆ, ಅದು ಅಷ್ಟು ಸುಲಭದ ಮಾತಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಂತನೆ ನಡೆಸ ಲಾಗುವುದು. ಈಗಾಗಲೇ, ಕಲಬುರಗಿಯಿಂದ ಬೆಂಗಳೂರಿಗೆ ನೇರ ರೈಲಿನ ಬೇಡಿಕೆ ಬಗ್ಗೆ, ವಂದೇ ಭಾರತ್ ರೈಲಿನ ವಿಚಾರ, ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಕಾಮಗಾರಿ ಹೀಗೆ ಹಲವಾರು ವಿಷಯಗಳ ಬೇಡಿಕೆಗಳಿವೆ. ಎಲ್ಲವನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಈ ಭಾಗದ ಜನರ ಬೇಡಿಕೆಗಳ ಬಗ್ಗೆ ಕೇವಲ ಭರವಸೆ ನೀಡಿದ್ದು ಬಿಟ್ಟರೇ, ಪ್ರಬಲ ಇಚ್ಛಾ ಶಕ್ತಿ ಅವರ ಮಾತಿನಲ್ಲಿ ಕಾಣಲಿಲ್ಲ.
ಕೇಂದ್ರ ಸರಕಾರದ ಅಲಕ್ಷ್ಯ : ಹೀಗಾಗಿ, ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಯು ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪ್ರಮುಖವಾಗಿದೆ. ಇದು ಸಂಪರ್ಕ ಸುಧಾರಿಸು ವುದರ ಜತೆಗೆ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ. ಆದಾಗ್ಯೂ, ರಾಜಕೀಯ ಮತ್ತು ತಾಂತ್ರಿಕ ಕಾರಣಗಳಿಂದ ಈ ಯೋಜನೆ ಇನ್ನೂ ನೆರವೇರಿಲ್ಲ. ಕಳೆದ ನಾಲ್ಕು ದಶಕಗಳಿಂದ ಇಲ್ಲಿನ ಜನರ ಬೇಡಿಕೆಗೆ ಕೇಂದ್ರ ಸರಕಾರ ಲಕ್ಷ್ಯ ಕೊಡುತ್ತಿಲ್ಲ. ನಾಯಕರಾದ ವರು ಕ್ರೆಡಿಟ್ ಪೋಲಿಟಿಕ್ಸ್ ಬಿಟ್ಟು, ಜಿಲ್ಲೆಯ ಜನರ ಬದುಕಿಗೆ ಸ್ಪಂದಿಸ ಬೇಕಾಗಿದೆ.
ಕೋಟ್ಯಂತರ ಆದಾಯ: ರೈಲ್ವೆ ಇಲಾಖೆಗೆ 2023-24ನೇ ಸಾಲಿನಲ್ಲಿ ಜಿಲ್ಲೆಯೊಂದರಿಂದಲೇ ಬರೋಬ್ಬರಿ 1082 ಕೋಟಿ ರು. ಗಳಿಗೂ ಹೆಚ್ಚು ಆದಾಯ ಪಡೆಯುತ್ತಿದೆ. ಗರಿಷ್ಠ ಆದಾಯ ಬಂದರೂ ರೈಲ್ವೆ ವಿಭಾಗೀಯ ಕೇಂದ್ರ ಆರಂಭಿಸದೇ ಇರುವ ಬಗ್ಗೆ ವ್ಯಾಪಕ ಜನಾಕ್ರೋಶಕ್ಕೆ ಕಾರಣ ವಾಗಿದೆ. ಪ್ರಯಾಣಿಕರು, ಗೂಡ್ಸ್, ಕಾರ್ಖಾನೆಗಳಿಂದ ಭರ್ಜರಿ ಆದಾಯವನ್ನು ರೈಲ್ವೆ ಇಲಾಖೆ ಪಡೆಯುತ್ತಿದೆ. ರೈಲ್ವೆ ಇಲಾಖೆ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಿಂದ ಪ್ರಯಾಣಿಸಿದ ಪ್ರಯಾಣಿಕ ರಿಂದಲೇ ಒಂದು ವರ್ಷಕ್ಕೆ 143.3 ಕೋಟಿ ರು. ಆದಾಯ ಪಡೆದಿದೆ. ಕಲಬುರಗಿ 108.1 ಕೋಟಿ, ವಾಡಿ 12 ಕೋಟಿ, ತಾಜಸುಲ್ತಾನಪುರ 0.6 ಕೋಟಿ, ಶಹಾಬಾದ್ 3.9 ಕೋಟಿ, ಚಿತ್ರಾಪುರ 4.8, ಸೇಡಂ 12.9 ಕೋಟಿ ಸೇರಿ ಒಟ್ಟು 143.3 ಕೋಟಿ ರೂ. ಜಿಲ್ಲೆ ಪ್ರಯಾಣಿಕರಿಂದಲೇ ಆದಾಯ ಪಡೆಯುತ್ತಿದೆ.
ಆದರೆ, ರೈಲ್ವೆ ಇಲಾಖೆಗೆ ವಿಭಾಗೀಯ ಸ್ಥಾನಮಾನ ನೀಡಲು ರಾಜಕೀಯ ಇಚ್ಛಾಶಕ್ತಿ ಕೊರತೆಯಿದೆ. ಜಿಲ್ಲೆಯು ಎಲ್ಲ ಮೂಲಗಳಿಂದ ವಿಭಾಗೀಯ ಕೇಂದ್ರಕ್ಕೆ ಎಲ್ಲ ಅರ್ಹತೆಯಿದ್ದರೂ ಪಕ್ಷಗಳ ಪ್ರತಿಷ್ಠೆಯ ಹಗ್ಗಜಗ್ಗಾಟದಿಂದ ವಂಚಿತಗೊಳ್ಳುತ್ತಿದೆ.
ಮತ್ತಷ್ಟು ಲಾಭ ಸಾಧ್ಯತೆ : ಪ್ರಸ್ತುತ ಕಲಬುರೆಗಿ ಜಿಲ್ಲೆಯು ಸೋಲಾಪುರ ವಿಭಾಗೀಯ ಕೇಂದ್ರ ಹಾಗೂ ಸಿಕ್ಕಿಂದರಾಬಾದ್ ವಿಭಾಗೀಯ ಕೇಂದ್ರಕ್ಕೆ ಹಂಚಿ ಹೋಗಿದೆ. ಸೋಲಾಪುರ ವಿಭಾಗವೊಂದೇ 1000 ಕೋಟಿ ರು. ಒಳಗೆ ಆದಾಯ ಗಳಿಸುತ್ತಿದೆ. ಆದರೆ, ಕಲಬುರಗಿ ಜಿಲ್ಲೆಯೊಂದೇ ಸಾವಿರ ಕೋಟಿ ರು. ಆದಾಯದ ಗಡಿ ದಾಟಿದೆ. ಇನ್ನು ಕಲಬುರಗಿ ವಿಭಾಗೀಯ ಕೇಂದ್ರ ಘೋಷಣೆಯಾದರೆ ಯಾದಗಿರಿ, ರಾಯಚೂರು, ಬೀದರ್, ಬಾಗಲಕೋಟೆ, ವಿಜಯಪುರ ರೈಲ್ವೆ ನಿಲ್ದಾಣಗಳೂ ಸೇರುವು ದರಿಂದ ಇನ್ನೂ ಹೆಚ್ಚಿನ ಆದಾಯ ಗಳಿಸಲಿದೆ.
ರೈಲ್ವೆ ಡಿವಿಷನ್ ಕತೆ ಸಾಗಿ ಬಂದ ದಾರಿ..
ನ್ಯಾ.ಎಚ್.ಸಿ ಸರೀನ್ ಸಮಿತಿ ಶಿಫಾರಸು: ೧೯೮೪
ಬಜೆಟ್‌ನಲ್ಲಿ ಘೋಷಣೆ: ಡಿಸೆಂಬರ್ ೨೦೧೩
ಕಟ್ಟಡಕ್ಕಾಗಿ ಕರೆದ ಟೆಂಡರ್ ಮೊತ್ತ : ೩.೫ ಕೋಟಿ
ರೈಲ್ವೆ ಡಿವಿಷನ್ ಗೆ ಶಂಕುಸ್ಥಾಪನೆ: ಫೆ.೨೮, ೨೦೧೪
ಯೋಜನೆಗಾಗಿ ನೀಡಿದ ಒಟ್ಟು ಜಾಗ: ೪೨ ಎಕರೆ
ನಿಯೋಜಿತ ವಿಶೇಷ ಅಧಿಕಾರಿ: ಎಂ ಆರ್ ಎನ್ ರೆಡ್ಡಿ
ಟೆಂಡರ್ ರದ್ದುಪಡಿಸಿದ ದಿನ: 2014 (ಮಾ. 13) ಡಿಪಿಆರ್‌ಗಾಗಿ ತೆಗೆದಿಟ್ಟ ಹಣಕಾಸು : ೭೬ ಕೋಟಿ