ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2025) ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ನಾಯಕ ಟೆಂಬ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ(South Africa vs Australia Final) ಮೊದಲು ಬ್ಯಾಟಿಂಗ್ ನಡೆಸಲಿದೆ. ಉಭಯ ತಂಡಗಳು ಫೈನಲ್ ಪಂದ್ಯಕ್ಕೂ ಮುನ್ನ ದಿನವೇ ಆಡುವ 11ರ ಬಳಗವನ್ನು ಪ್ರಕಟಿಸಿದ ಕಾರಣ ಟಾಸ್ ವೇಳೆ ತಂಡದ ಬಗ್ಗೆ ಹೆಚ್ಚು ಕುತೂಹಲ ಇರಲಿಲ್ಲ. ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3ಕ್ಕೆ ಆರಂಭವಾಗಲಿದೆ. ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಇರಲಿದೆ.
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇದು ಮುಖಾಮುಖಿಯಾಗುತ್ತಿರುವುದು 2ನೇ ಬಾರಿ. ಈ ಹಿಂದೆ ಲಾರ್ಡ್ಸ್‌ನಲ್ಲಿ ಇತ್ತಂಡಗಳು ಪರಸ್ಪರ ಸೆಣಸಾಡಿದ್ದು 1912ರಲ್ಲಿ. ಅಂದರೆ 113 ವರ್ಷಗಳ ಬಳಿಕ. ಆ ಪಂದ್ಯದಲ್ಲಿ ಆಸೀಸ್ 10 ವಿಕೆಟ್ ಜಯಗಳಿಸಿತ್ತು.
ಆಸೀಸ್ ಈ ವರೆಗೂ 13 ಬಾರಿ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ ಆಡಿದ್ದು, 10 ಬಾರಿ ಚಾಂಪಿಯನ್ ಆಗಿದೆ. ದ.ಆಫ್ರಿಕಾ ಈ ವರೆಗೂ ಐಸಿಸಿ ಟ್ರೋಫಿ ಗೆದ್ದಿದ್ದು ಒಮ್ಮೆ ಮಾತ್ರ. 1998ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಆದರೆ ವಿಶ್ವಕಪ್ ಇದುವರೆಗೂ ಗೆದ್ದಿಲ್ಲ. ಈ ಬಾರಿ ಚೊಚ್ಚಲ ಟ್ರೋಫಿ ಗೆಲ್ಲುವ ಕಾತರದಲ್ಲಿದೆ.
ಉಭಯ ತಂಡಗಳು
ಆಸ್ಟ್ರೇಲಿಯಾ: ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಕ್ಯಾಮರಾನ್ ಗ್ರೀನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್, ಜೋಶ್ ಹೇಝಲ್‌ವುಡ್.
ದಕ್ಷಿಣ ಆಫ್ರಿಕಾ: ಟೆಂಬ ಬವುಮ (ನಾಯಕ), ಐಡನ್ ಮಾರ್ಕ್‌ರಮ್, ರಿಯಾನ್ ರಿಕಲ್ಟನ್, ವಿಯಾನ್ ಮುಲ್ಡರ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಬೇಡಿಂಗ್‌ಹ್ಯಾಮ್, ಕೈಲ್ ವೆರೇಯ್ನ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ.
ಇದನ್ನೂ ಓದಿ WTC Final 2025: ಮೂರನೇ ಸ್ಥಾನಿ ಭಾರತಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?