ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕಿ (Baba Siddique) ಕೊಲೆಯ ಮುಖ್ಯ ಸೂತ್ರಧಾರಿ ಜೀಶಾನ್ ಅಖ್ತರ್‌ನನ್ನು (Zeeshan Akhtar) ಮಂಗಳವಾರ ಕೆನಡಾದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 66 ವರ್ಷದ ಬಾಬಾ ಸಿದ್ದಿಕಿ ಅವರನ್ನು 2024ರ ಅಕ್ಟೋಬರ್ 12ರ ರಾತ್ರಿ ಮುಂಬೈನ ಬಾಂದ್ರಾ (ಪೂರ್ವ)ದಲ್ಲಿ ತಮ್ಮ ಮಗ, ಮಾಜಿ ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗಡೆ ಮೂವರು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಜೀಶಾನ್ ಅಖ್ತರ್ ಕೊಲೆಗಾರರನ್ನು ನಿರ್ವಹಿಸಿ, ಕೃತ್ಯವನ್ನು ಯೋಜಿಸಿದ್ದನೆಂದು ಆರೋಪಿಸಲಾಗಿದೆ.
ಜೀಶಾನ್ ಅಖ್ತರ್ ಯಾರು?
ಪಂಜಾಬ್‌ನ ಜಲಂಧರ್‌ನ ನಿವಾಸಿಯಾದ ಜೀಶಾನ್ ಅಖ್ತರ್‌ನ ಇನ್ನೊಂದು ಹೆಸರು ಮೊಹಮ್ಮದ್ ಯಾಸಿನ್ ಅಖ್ತರ್ ಆಗಿದ್ದು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ. 2022ರಲ್ಲಿ ಸಂಬಂಧವಿಲ್ಲದ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಆತನನ್ನು ಬಂಧಿಸಿದ್ದರು. ಬಾಬಾ ಸಿದ್ದಿಕಿ ಕೊಲೆ ತನಿಖೆಯಲ್ಲಿ ಆತನ ಹೆಸರು ಮುಖ್ಯ ಶಂಕಿತನಾಗಿ ಕೇಳಿ ಬಂದಿದೆ. ಧರ್ಮರಾಜ್ ಕಶ್ಯಪ್, ಗುರ್ಮೆಲ್ ಬಲ್ಜೀತ್ ಸಿಂಗ್ ಮತ್ತು ಶಿವಕುಮಾರ್ ಗೌತಮ್ ಎಂಬ ಮೂವರು ಶೂಟರ್‌ಗಳನ್ನು ಆತ ನೇಮಿಸಿದ್ದಾನೆ ಎಂಬ ಆರೋಪವಿದೆ.
ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ
ಪೊಲೀಸ್ ತನಿಖೆ ಮತ್ತು ಚಾರ್ಜ್‌ಶೀಟ್ ವಿವರಗಳ ಪ್ರಕಾರ, ಅಖ್ತರ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಸಹಾಯಕನೆಂದು ಪರಿಗಣಿತನಾಗಿದ್ದಾನೆ. ಬಿಷ್ಣೋಯ್ ಗ್ಯಾಂಗ್ ದೇಶಾದ್ಯಂತ ಹಲವು ಗಂಭೀರ ಅಪರಾಧಗಳಿಗೆ ಕಾರಣವಾಗಿದೆ. ಪಂಜಾಬ್ ಜೈಲಿನಲ್ಲಿ ಗುರ್ಮೆಲ್ ಸಿಂಗ್‌ನನ್ನು ಭೇಟಿಯಾದಾಗ ಅಖ್ತರ್ ಗ್ಯಾಂಗ್‌ಗೆ ಸೇರಿದನೆಂದು ಶಂಕಿಸಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ, ಆತ ಹರಿಯಾಣದ ಕೈಥಾಲ್‌ಗೆ ತೆರಳಿ ಗುರ್ಮೆಲ್‌ನನ್ನು ಭೇಟಿಯಾಗಿದ್ದ.
2024ರ ಮೇಯಲ್ಲಿ ಅಖ್ತರ್ ಮತ್ತು ಗ್ಯಾಂಗ್‌ನ ಶುಭಂ ಲೊಂಕರ್‌ಗೆ ಸಿದ್ದಿಕಿಯನ್ನು ಕೊಲ್ಲುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆತ ಶೂಟರ್‌ಗಳಿಗೆ ಶಸ್ತ್ರಾಸ್ತ್ರ ಮತ್ತು ನೆಲೆ ಒದಗಿಸಿದ. ಕೊಲೆಗೆ ಒಂದು ತಿಂಗಳ ಮೊದಲು ಅನುಮಾನ ಬಾರದಿಲಿ ಎಂದು ಆತ ಮುಂಬೈ ತೊರೆದನೆಂದು ಪೊಲೀಸರು ತಿಳಿಸಿದ್ದಾರೆ.