ಚಿಕ್ಕನಾಯಕನಹಳ್ಳಿ : ಜನ ಸಂಪರ್ಕ ಸಭೆ ಮತ್ತು ಮನೆ ಬಾಗಿಲಿಗೆ-ಮನೆ ಮಗ ಕಾರ್ಯಕ್ರಮ ದಿಂದ ಅಧಿಕಾರಿಗಳು ಹೈರಾಣ ಎಂಬ ವಿಶ್ವವಾಣಿ ವರದಿಯನ್ನು ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸಿ.ಬಿ. ಸುರೇಶಬಾಬು ಅವರು ಪ್ರಸ್ತಾಪಿಸಿದರು.
ನನ್ನ ಸಭೆಗೆ ಬರಲು ನಿಮಗೆ ತೊಂದರೆಯೇ ? ಲಿಖಿತವಾಗಿ ತಿಳಿಸಿ, ಒಂದೋ ದಕ್ಷತೆಯಿಂದ ಕೆಲಸ ಮಾಡಿ ಇಲ್ಲವೇ ಜಾಗ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಹರಿಹಾಯ್ದರು. ಶಾಸಕರ ಭಾಷಣದ ನಡುವೆ ಕೆಡಿಪಿ ಸದಸ್ಯ ದೇವರಾಜ್ ಅವರು ವಿಶ್ವವಾಣಿ ವರದಿಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಮುಂದಾದ ಘಟನೆ ನಡೆಯಿತು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಆಡಳಿತದ ಹಿತದೃಷ್ಟಿಯಿಂದ ವಾರದಲ್ಲಿ ಎರಡು ದಿನ ಈ ಸಭೆಗಳನ್ನು ಮಾಡು ತ್ತಿದ್ದು ಅಧಿಕಾರಿಗಳು ಎಷ್ಟರ ಮಟ್ಟಿಗೆ ನಿಮ್ಮ ಇಲಾಖೆಗಳಲ್ಲಿ ಕೆಲಸ ಮಾಡಿದ್ದೀರಾ ಎಂದು ನೋಡು ತ್ತೇನೆ ಎಂದು ಸಿಟ್ಟಾದರು. ಕೆಡಿಪಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಇಓ ದೊಡ್ಡಸಿದ್ದಯ್ಯ ಅವರಿಗೆ ಸೂಚಿಸಿದರು.
ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದು ಅಕ್ರಮ ವ್ಯವಹಾರಕ್ಕೆ ಅವರೇ ಸಾಥ್ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಮಹಿಳೆಯರು ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ ದೂರು ನೀಡಿದಾಗ ಕಾಟಾಚಾರಕ್ಕೆ ಎಂಬತೆ ದಾಳಿ ನಡೆಸಿ ಸಾಕ್ಷಿಗೆ ಸಹಿ ಹಾಕಲು ಒತ್ತಾಯಿಸುತ್ತಾರೆ ಈ ಉಸಾಬರಿ ಬೇಡವೆಂದು ದೂರುದಾರರು ಸುಮ್ಮನಾಗುತ್ತಾರೆ ಎಂಬ ಗುರುತರ ಆರೋಪವನ್ನು ಕೆಡಿಪಿ ಸದಸ್ಯ ಗೌಸ್‌ಪೀರ್ ಮಾಡಿದರು. ತಿಂಗಳಿಗೆ ಇಷ್ಟು ಲೀಟರ್ ಮದ್ಯವನ್ನು ಮಾರಾಟ ಮಾಡಬೇಕು ಎಂದು ಸರಕಾರ ಟಾರ್ಗೆಟ್ ನೀಡುತ್ತದೆ. ಇಂಥ ವ್ಯವಸ್ಥೆಯಿಂದ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಣೆ ಆಗುತ್ತಿದೆ ಎಂದು ಶಾಸಕರು ತಿಳಿಸಿದರು.
ಮಿಂಚಿದ ಕೆಡಿಪಿ ಸದಸ್ಯರು !
ಕೆಡಿಪಿ ಸದಸ್ಯರಾದ ಬರಕನಾಳ್ ಶಂಕರ್ ಹಾಗು ದೇವರಾಜು ಸಭೆಯ ಆರಂಭದಿಂದಲೂ ಅಧಿಕಾರಿಗಳನ್ನು ಪ್ರಶ್ನೆ ಕೇಳಿ ಗಮನ ಸೆಳೆದರು. ಶೌಚಾಲಯ, ಅಂಗನವಾಡಿ ಕಟ್ಟಡ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆ, ಸಹಿತ ಕೃಷಿ, ತೋಟಗಾರಿಕೆ, ಆಹಾರ ಇಲಾಖೆ ಹೀಗೆ ಪ್ರತಿಯೊಂದು ಇಲಾಖೆಗಳ ಅನೇಕ ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಿದರು. ಗೌಸ್‌ಪೀರ್, ರಾಮಚಂದ್ರಯ್ಯ ದನಿ ಗೂಡಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಪುರಂದರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊನ್ನೆಬಾಗಿ ಶಶಿಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜ್‌ಕುಮಾರ್, ಬೆಸ್ಕಾಂ ಎಇಇ ಗವಿರಂಗಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ಮಾರುತಿ, ಲೋಕೋಪಯೋಗಿ ಇಲಾಖೆ ಎಇಇ ತಿಮಣ್ಣ, ಸಿಡಿಪಿಓ ಹೊನ್ನಪ್ಪ, ಕೃಷಿ ಇಲಾಖೆ ಎಡಿ ಶಿವರಾಜ್‌ಕುಮಾರ್, ಪಶುಪಾಲನೆ ಇಲಾಖೆ ನಿರ್ದೇಶಕ ನಾಗಭೂಷಣ್ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.