Karunadu Studio

ಕರ್ನಾಟಕ

Pralhad Joshi: ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼ; ಇಂಡಿ ಒಕ್ಕೂಟ ವಿನಾಕಾರಣ ಭಯ ಬಿಟ್ಟು ಈಗಿಂದಲೇ ತಯಾರಿ ನಡೆಸಿಕೊಳ್ಳಲಿ: ಪ್ರಲ್ಹಾದ್‌ ಜೋಶಿ – Kannada News | Pralhad Joshi union minister pralhad joshi statement in One Nation One Election Seminar at Kalaburagi


ಕಲಬುರಗಿ: ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಕೇಂದ್ರ ಸರ್ಕಾರ, 2029ರ ವೇಳೆಗೆ ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼಗೆ ಸಿದ್ಧತೆ ನಡೆಸಿದ್ದು, ಇದರಿಂದ ಭಾರತದ ಅರ್ಥ ವ್ಯವಸ್ಥೆ ಬದಲಾಗಲಿದೆ. ರಾಜಕೀಯ ಸ್ಥಿರತೆ ಬಲಗೊಳ್ಳುತ್ತದೆ. ಹಾಗಿದ್ದರೂ ಕಾಂಗ್ರೆಸ್‌ ಅನಗತ್ಯ ಕಳವಳ ವ್ಯಕ್ತಪಡಿಸುತ್ತಿದ್ದು, ಈ ಆತಂಕಕ್ಕೆ ಯಾವುದೇ ಅರ್ಥವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ಹೇಳಿದರು. ಕಲಬುರಗಿ ಪಿಡಿಎ ಇಂಜಿನಿಯರಿಂಗ್‌ ಕಾಲೇಜ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ʼಒನ್ ನೇಷನ್‌ ಒನ್‌ ಎಲೆಕ್ಷನ್‌ʼ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟ ವಿನಾಕಾರಣ ಭಯಪಡುವುದನ್ನು ಬಿಟ್ಟು ಈಗಿನಿಂದಲೇ ತಯಾರಿ ನಡೆಸಿಕೊಳ್ಳಲಿ ಎಂದು ಸಲಹೆ ನೀಡಿದರು.

ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼ ಜಾರಿಗೊಂಡರೆ ತಾನು ಪ್ಯಾನ್‌ ಇಂಡಿಯಾ ಪಾರ್ಟಿ ಆಗಲು ಸಾಧ್ಯವಿಲ್ಲ ಎಂಬ ಭಯದಲ್ಲಿ ಕಾಂಗ್ರೆಸ್‌ ವಿಶೇಷ ರೀತಿ ವರ್ತಿಸುತ್ತಿದೆ, ಅನಗತ್ಯ ಪ್ರಶ್ನೆಗಳನ್ನು ಮುಂದಿಡುತ್ತಿದೆ. ಆದರೆ, ಕಾಂಗ್ರೆಸ್‌ ಪಾರ್ಟಿ ಇದನ್ನೆಲ್ಲ ಬಿಟ್ಟು ಇನ್ನೂ ಸಾಕಷ್ಟು ಅಂದರೆ ನಾಲ್ಕು ವರ್ಷ ಸಮಯಾವಕಾಶವಿದ್ದು, ಸಿದ್ಧಗೊಳ್ಳಲಿ ಎಂದರು.

ಕಾಂಗ್ರೆಸ್‌ಗೆ ಮೋದಿ ಭಯ

ಮೋದಿ ಅವರು ಅಧಿಕಾರದಲ್ಲಿದ್ದರೆ ಏನಾದರೊಂದು ಮಾಡುತ್ತಾರೆ, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂಬ ವಿಶ್ವಾಸದಿಂದ ದೇಶದ ಜನ ನರೇಂದ್ರ ಮೋದಿ ಅವರಿಗೆ ಸತತ ಮೂರು ಬಾರಿ ಅಧಿಕಾರ ನೀಡಿದ್ದಾರೆ. ಬಹುಶಃ ಕಾಂಗ್ರೆಸ್ಸಿಗರಿಗೆ ಇದೇ ಭಯ ಕಾಡುತ್ತಿರಬೇಕು. ಮೋದಿ ಮತ್ತು ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಹೇಗೆ? ಎಂಬ ಭಯದಲ್ಲಿ ಕಾಂಗ್ರೆಸ್‌ ಪಕ್ಷ ʼಒಂದು ರಾಷ್ಟ್ರ ಒಂದು ಚುನಾವಣೆʼಗೆ ತಗಾದೆ ತೆಗೆಯುತ್ತಿದೆ. ಆದರೆ, ಈ ಆತಂಕಕ್ಕೆ ಯಾವುದೇ ರೀತಿಯ ಅರ್ಥವಿಲ್ಲ ಎಂದು ಹೇಳಿದರು.

ಒಮ್ಮೆಗೇ ಚುನಾವಣೆ ನಡೆದಾಗ ಏನಾಗಿದೆ?

ದೇಶದಲ್ಲಿ ಈ ಹಿಂದೆ 1952, 1957, 1962 ಮತ್ತು 1967ರಲ್ಲಿ ಒಟ್ಟು ನಾಲ್ಕು ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟೊಟ್ಟಿಗೇ ನಡೆದಿವೆ. ನಂತರದಲ್ಲೂ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎರಡೂ ಚುನಾವಣೆಗಳು ಒಟ್ಟೊಟ್ಟಿಗೇ ನಡೆದ ಉದಾಹರಣೆಯಿದೆ. ಹಾಗಾದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದಿತೆ? ಎಂದು ಪ್ರಶ್ನಿಸಿದ ಸಚಿವ ಜೋಶಿ, ಒನ್‌ ನೇಷನ್‌ ಒನ್‌ ಎಲೆಕ್ಷನ್‌ಗೆ ಕಾಂಗ್ರೆಸ್‌ ನಾಯಕರದ್ದು ಅನಗತ್ಯ ಆತಂಕ, ಭಯ ಎಂದು ಆರೋಪಿಸಿದರು.

2024ರ ಏಪ್ರಿಲ್‌-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು. 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಬಳಿಕವೂ ಜಾರ್ಖಂಡ. ಮಹಾರಾಷ್ಟ್ರ, ಹರಿಯಾಣ, ಒಡಿಸ್ಸಾ ಹೀಗೆ ವಿವಿಧೆಡೆ ವಿಧಾನಸಭೆ ಚುನಾವಣೆಗಳು ನಡೆದಿವೆ. ಫಲಿತಾಂಶ ಏನಾಯಿತು? ಕರ್ನಾಟಕದಲ್ಲಿ ಕಾಂಗ್ರೆಸ್‌ 136 ಸೀಟು ಪಡೆದು ಅಧಿಕಾರಕ್ಕೆ ಬರಲಿಲ್ಲವೇ? ಎಂದು ಪ್ರಶ್ನಿಸಿದರು.

ಐದು ವರ್ಷದಲ್ಲಿ ಸರ್ಕಾರಗಳು ಬಿದ್ದರೆ ಏನು? ಲೋಕಸಭೆ ವಿಸರ್ಜನೆಯಾದರೆ? ಎಂಬ ಪ್ರಶ್ನೆ ಕಾಂಗ್ರೆಸ್‌ ಎತ್ತಿದೆ. ಇದಕ್ಕೂ ಸದನದಲ್ಲೇ ಉತ್ತರ ಕೊಟ್ಟಿದ್ದೇವೆ. ಹೆಚ್ಚೆಂದರೆ ಒಂದೆಡೆ ಸರ್ಕಾರಗಳು ಬೀಳಬಹುದು. ಕೇಂದ್ರ ಸರ್ಕಾರವೇ ಬಿದ್ದರೂ ಸರಿ ಇನ್ನುಳಿದ ಅವಧಿಗಷ್ಟೇ ಮರು ಚುನಾವಣೆ ನಡೆಯುತ್ತದೆ. ಆಗ ಅಷ್ಟೊಂದು ಆರ್ಥಿಕ ಹೊರೆಯಾಗದು ಎಂದ ಸಚಿವರು, ಕಾಂಗ್ರೆಸ್‌ ಪಕ್ಷದಲ್ಲಿ ಕೆಲವರು ತಿಳಿದು ಮಾತನಾಡುತ್ತಾರೋ? ತಿಳಿಯದೇ ಮಾತನಾಡುತ್ತಾರೋ? ಗೊತ್ತಿಲ್ಲ. ಒಟ್ಟಾರೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದರು.

ಅತಿ ಹೆಚ್ಚು ಬಾರಿ ಚುನಾಯಿತ ಸರ್ಕಾರವನ್ನು ಕೆಡವಿದ್ದೇ ಕಾಂಗ್ರೆಸ್‌

ಒನ್‌ ನೇಷನ್‌ ಒನ್‌ ಎಲೆಕ್ಷನ್‌ ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೇ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಅತಿ ಹೆಚ್ಚು ಬಾರಿ ಚುನಾಯಿತ ಸರ್ಕಾರವನ್ನು ಕೆಡವಿದೆ. ಸ್ವಾತಂತ್ರ್ಯಾ ನಂತರ ಬರೋಬ್ಬರಿ 125 ಬಾರಿ ಚುನಾಯಿತ ಸರ್ಕಾರಗಳನ್ನು ತೆಗೆದು ಹಾಕಿದವರು ಇವರೇ. 90 ಬಾರಿ ರಾಜ್ಯ ಸರ್ಕಾರಗಳನ್ನು ಕಿತ್ತೆಸೆದರು. ಇಂದಿರಾ ಗಾಂಧಿ ಆಡಳಿತಾವಧಿಯಲ್ಲೇ ಅತಿ ಹೆಚ್ಚು 39 ಬಾರಿ ರಾಜ್ಯ ಸರ್ಕಾರಗಳನ್ನು ಬರ್ಕಸ್‌ ಮಾಡಿದರು. ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಮಾತು ಕೇಳದ ಸರ್ಕಾರಗಳನ್ನು ತೆಗೆದು ಹಾಕಿ ರಾಷ್ಟ್ರಪತಿ ಆಡಳಿತ ಹೇರುತ್ತಿದ್ದರು ಎಂದು ಸಚಿವ ಜೋಶಿ ಆರೋಪಿಸಿದರು.

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ

ಜಗತ್ತಿನಲ್ಲಿ 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಕಲ್ಪನೆ ಅತ್ಯಂತ ಸ್ಪಷ್ಟವಾಗಿತ್ತು. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲೇ ಬಸವಾದಿ ಶರಣರ ಕಾಲದಲ್ಲೇ ಪ್ರಜಾಪ್ರಭುತ್ವ ಹಾಸು ಹೊಕ್ಕಾಗಿತ್ತು. ನಮ್ಮದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವ ಎನ್ನುವುದು ಭಾರತೀಯರ ರಕ್ತದಲ್ಲೇ ಇದೆ. ಇದನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಯಾರೂ ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼನಿಂದ ಭಾರತ ಪರಿಣಾಮಕಾರಿ ಪರಿವರ್ತನೆ ಹೊಂದಲಿದೆ ಎಂದು ತಿಳಿಸಿದರು.

ಸಂವಿಧಾನಕ್ಕೆ 129ನೇ ತಿದ್ದುಪಡಿ

ಯಾವುದೇ ಸರ್ಕಾರ ವರ್ಷದ 12 ತಿಂಗಳೂ, ದಿನದ 24 ತಾಸೂ ಚುನಾವಣೆ ಮಾಡುತ್ತ ಕೂರಲು ಸಾಧ್ಯವಿಲ್ಲ. ಒಂದು ಎಂಎಲ್‌ಸಿ ಚುನಾವಣೆ ನಡೆದರೂ ಎಲ್ಲಾ ಬಂದ್‌ ಮಾಡುತ್ತೇವೆ. ಇದರಿಂದ ದೇಶಕ್ಕೇ ಆರ್ಥಿಕ ನಷ್ಟ. ಹಾಗಾಗಿ ಈ ವ್ಯವಸ್ಥೆ ಬದಲಿಸಲು ಕೇಂದ್ರ ಸರ್ಕಾರ ಭಾರತೀಯ ಸಂವಿಧಾನಕ್ಕೆ 129ನೇ ತಿದ್ದುಪಡಿ ಮೂಲಕ ಬದಲಾವಣೆ ತಂದು ಏಕ ಕಾಲಕ್ಕೆ ಚುನಾವಣೆ ನಡೆಸಲು ಯೋಜಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಶೇ. 83ರಷ್ಟು ಜನರ ಅಪೇಕ್ಷೆಯೂ ಆಗಿದೆ

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕ ಕಾಲಕ್ಕೆ ನಡೆಯಬೇಕು ಎಂಬುದು ಜನರ ಅಪೇಕ್ಷೆ ಸಹ ಆಗಿದೆ. ದೇಶದ ಶೇ. 83ರಷ್ಟು ಜನ ಅಭಿವೃಧ್ಧಿ ದೃಷ್ಟಿಯಿಂದ ಇದೊಳ್ಳೇ ವ್ಯವಸ್ಥೆ ಎಂದಿದ್ದಾರೆ. ಇನ್ನು, 2019ರಲ್ಲಿ ನಾನು ಸಂಸದೀಯ ವ್ಯವಹಾರ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼ ಬಗ್ಗೆ ಚರ್ಚಿಸಿದ್ದೇವೆ. ದೇಶದ ಒಟ್ಟಾರೆ 62 ರಾಜಕೀಯ ಪಕ್ಷಗಳಲ್ಲಿ 47 ಪಕ್ಷಗಳು ಇದಕ್ಕೆ ಬೆಂಬಲ ಸೂಚಿಸಿವೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸ್ಟಾಲಿನ್, ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಕರೆದು ಚರ್ಚಿಸಿಯೇ ಇದಕ್ಕೆ ಸಿದ್ಧತೆ ನಡೆಸಿದ್ದೇವೆ. ಅಲ್ಲದೇ, ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ಅಧ್ಯಯನ ವರದಿ ಸಹ ಸಿದ್ಧಪಡಿಸಿದ್ದು, ಆ ಪ್ರಕಾರ ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼಗೆ ತಯಾರಿ ನಡೆಸಿದ್ದೇವೆ ಎಂದು ವಿವರಿಸಿದರು.

2024ರಲ್ಲೇ ಆಗಿದ್ದರೆ ಶೇ. 1.5 ಜಿಡಿಪಿ ಹೆಚ್ಚುತ್ತಿತ್ತು

ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼ ಚರ್ಚೆ ಶುರುವಾದಂತೆ 2024ರ ಚುನಾವಣೆಯಲ್ಲೇ ಇದು ಸಾಧ್ಯವಾಗಿದ್ದರೆ ದೇಶದ ಆರ್ಥಿಕತೆಗೆ ₹4.5 ಲಕ್ಷ ಕೋಟಿ ಉಳಿತಾಯ ಆಗುತ್ತಿತ್ತು ಮತ್ತು ಇಷ್ಟೊತ್ತಿಗಾಗಲೇ ದೇಶದ ಜಿಡಿಪಿ ಶೇ.1.5 ಹೆಚ್ಚಿರುತ್ತಿತ್ತು. ಕೋಟ್ಯಂತರ ಬಡವರಿಗೆ ಲಾಭವಾಗುತ್ತಿತ್ತು, ಅಭಿವೃದ್ಧಿಯಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿರುತ್ತಿತ್ತು ಎಂದು ಹೇಳಿದರು.

2047ಕ್ಕೆ ಅತ್ಯಂತ ಅಭಿವೃದ್ಧಿ ಹೊಂದಿದ ಭಾರತ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಕಂಡು ವಿರೋಧಿಗಳು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಆರ್ಥಿಕತೆಯಲ್ಲಿ ಭಾರತ ಈಗ ಜಪಾನ್‌ ಅನ್ನು ಹಿಂದಿಕ್ಕಿದೆ. ಇನ್ನೆರೆಡು ವರ್ಷದಲ್ಲಿ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. 2047ಕ್ಕೆ ಜಗತ್ತಿನ ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಭಾರತವನ್ನು ವಜ್ರ-ವೈಢೂರ್ಯಗಳಿಂದ ಕೂಡಿದ ದೇಶವಾಗಿಸಿ ಜಗತ್ತಿನ ಮುಂದೆ ನಿಲ್ಲಿಸಲು ಸಂಕಲ್ಪ ಮಾಡಿದ್ದೇವೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಮೋದಿ ಅವರ ಹತ್ತೇ ವರ್ಷದ ಆಡಳಿತದಲ್ಲಿ ದೇಶದಲ್ಲಿ 26 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ. ದೇಶದ ಬಡತನ ಪ್ರಮಾಣ ಶೇ.5ಕ್ಕೆ ಇಳಿದಿದ್ದು, ಎರಡ್ಮೂರು ವರ್ಷಗಳಲ್ಲಿ ಸಂಪೂರ್ಣ ನಿರ್ಮೂಲನೆಗೊಳ್ಳಲಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌, ಒನ್‌ ನೇಷನ್‌ ಒನ್‌ ಗ್ರಿಡ್‌ ವ್ಯವಸ್ಥೆ ಯಶಸ್ವಿಗೊಂಡಿದೆ. ಸದ್ಯದಲ್ಲೇ ʼಒನ್‌ ನೇಷನ್‌ ಒನ್‌ ಟೈಂʼ ಸಹ ಲಾಂಚ್‌ ಆಗಲಿದ್ದು, ಅದರಂತೆ ಒನ್‌ ನೇಷನ್‌ ಒನ್‌ ಎಲೆಕ್ಷನ್‌ ಸಾಕಾರಗೊಳ್ಳಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಒನ್‌ ನೇಷನ್‌ ಒನ್‌ ಗ್ರಿಡ್‌ನಿಂದ ವಿದ್ಯುತ್‌ ಸಾಫಲ್ಯ

ಸ್ವಾತಂತ್ರ್ಯದ ಬಳಿಕ 1950ರಿಂದ 2014ರವರೆಗೆ 64 ವರ್ಷದಲ್ಲಿ ಭಾರತ 240 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿತ್ತು. ಆದರೆ, 2014-2024ರವರೆಗಿನ ಹತ್ತೇ ವರ್ಷದ ಮೋದಿ ಆಡಳಿತಾವಧಿಯಲ್ಲಿ ಅದನ್ನು 440 ಮೆಗಾವ್ಯಾಟ್‌ಗೆ ಹೆಚ್ಚಿಸಿದ್ದೇವೆ. ʼಒನ್‌ ಗ್ರಿಡ್‌ ಒನ್‌ ನೇಷನ್‌ʼ ನಿಂದ ಇದು ಸಾಧ್ಯವಾಗಿದೆ. ದೇಶದೊಳಗೆ ಇಂದು ಪವರ್‌ ಕಟ್‌ ಕೇವಲ 0.01 ಪರ್ಸೆಂಟ್‌ಗೆ ಇಳಿದಿದೆ. 2014ರ ಮೊದಲು ಗ್ರಿಡ್‌ಗಳಿಂದ ಹೆಚ್ಚು ವಿದ್ಯುತ್‌ ಪಡೆಯಲು ಹೋಗಿ ವಿದ್ಯುತ್‌ ಘಟಕವೇ ಸ್ಫೋಟಗೊಂಡು ಇಡೀ ಉತ್ತರ ಭಾರತ ಮೂರು ದಿನ ಕತ್ತಲೆಯಲ್ಲಿತ್ತು. ಪಶ್ಚಿಮ ಬಂಗಾಳದಲ್ಲೂ ಹಾಗೇ ಆಗಿತ್ತು. ಆದರೆ, ದೇಶದಲ್ಲೆಲ್ಲೂ ಈಗ ಆ ಸ್ಥಿತಿಯಿಲ್ಲ. ʼಒನ್‌ ಗ್ರಿಡ್‌ ಒನ್‌ ನೇಷನ್‌ʼ ಇದನ್ನೆಲ್ಲ ತೊಡೆದು ಹಾಕಿದೆ. ಅದರಂತೆ ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌ ವ್ಯವಸ್ಥೆ ಸಹ ದೇಶದ ಕಡು ಬಡವರು ಎಲ್ಲೇ ಹೋದರೂ ಸರಳಿತವಾಗಿ ಪಡಿತರ ಪಡೆಯುವಂಥ ವ್ಯವಸ್ಥೆಯಿದೆ. ಇದೆಲ್ಲ ದೇಶದ ಅಭಿವೃದ್ಧಿ, ಪರಿವರ್ತನೆಗೆ ಪೂರಕವಾಗಿದೆ. ಹಾಗೆಯೇ ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼ ಸಹ ದೇಶಕ್ಕೆ ಅನನ್ಯ ಕೊಡುಗೆಯಾಗಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಅಭಿಪ್ರಾಯಪಟ್ಟರು.

ಭಾರತೀಯ ಸ್ಟ್ಯಾಂಡರ್ಡ್‌ ಟೈಂ ಶೀಘ್ರವೇ ಲಾಂಚ್‌

ಜಗತ್ತಿನಲ್ಲಿ ಈವರೆಗೆ ಜಿಪಿಎಸ್‌ ಮೂಲಕ ಸಮಯ ಬರುತ್ತಿತ್ತು. ಈಗ ಭಾರತದ್ದೇ ಆದ ಇಂಡಿಯನ್‌ ಸ್ಟ್ಯಾಂಡರ್ಡ್‌ ಟೈಂ ಅನ್ನು ಸೆಟ್‌ ಮಾಡುತ್ತಿದ್ದೇವೆ. ನಮ್ಮ ಜಿಪಿಎಸ್‌ ನಮ್ಮ ಸ್ಟ್ಯಾಂಡರ್ಡ್‌ ಟೈಂ ಅಲ್ಲೇ ಬರುತ್ತದೆ. ಶೀಘ್ರದಲ್ಲೇ ನಾವದನ್ನು ಲಾಂಚ್‌ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಸಚಿವ ಪ್ರಲ್ಹಾದ್‌ ಜೋಶಿ ಘೋಷಿಸಿದರು.

ಭಾರತ ಜಗತ್ತಿನಲ್ಲೇ ಅತ್ಯಂತ ಪುರಾತನ ದೇಶ. ಆದರೆ, ಅನೇಕರಿಗೆ ಬ್ರಿಟಿಷರು ಬಂದ ನಂತರ ದೇಶ ಒಂದಾಯಿತು ಎಂಬ ಭ್ರಮೆಯಿದೆ. ಇದು ನಮ್ಮ ದುರ್ದೈವ. ಆದರೆ ಬೇರೆ ದೇಶಗಳು ಮತ್ತು ಅಲ್ಲಿನ ನಾಗರೀಕತೆ ಕಣ್ಣು ಬಿಡುವ ಮೊದಲೇ ಭಾರತವಿತ್ತು ಎಂಬ ಬಗ್ಗೆ ವಿಷ್ಣು ಪುರಾಣದಲ್ಲೇ ಉಲ್ಲೇಖವಿದೆ. ಜಗತ್ತಿಗೆ ವ್ಯಾಕರಣ ಸೂತ್ರ ಕೊಟ್ಟದ್ದು ಭಾರತ ಎಂಬುದನ್ನು ಯಾರೂ ಮರೆಯಬಾರದು ಎಂದು ಸಚಿವ ಜೋಶಿ ಕಿವಿಮಾತು ಹೇಳಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್‌ ಯಾವತ್ತೂ ಸಾಮಾಜಿಕ ಬದ್ಧತೆ ತೋರಿಲ್ಲ, ಜಾತಿ ಗಣತಿ ರಾಜಕೀಯ ನಾಟಕವಷ್ಟೇ: ಪ್ರಲ್ಹಾದ್‌ ಜೋಶಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ಉಮೇಶ ಜಾಧವ್‌, ಎಂಎಲ್‌ಸಿ ಶಶಿಲ್‌ ನಮೋಶಿ, ಕಲಬುರ್ಗಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಹಾಗೂ ಇತರರು ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »