ಕೋಲ್ಕತ್ತಾ: ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರ ಪೋಲಿಸರು ಮತ್ತು ಗಡಿ ಭದ್ರತಾ ಪಡೆ (BSF) ಬಾಂಗ್ಲಾದೇಶದವನೆಂದು(Illegal Immigrant) ತಪ್ಪಾಗಿ ಭಾವಿಸಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿರುವ ಘಟನೆ ವರದಿಯಾಗಿದೆ. ಮೆಹಬೂಬ್ ಶೇಕ್ ಎನ್ನುವ ವ್ಯಕ್ತಿ ಹೀಗೆ ಭದ್ರತಾ ಸಿಬ್ಬಂದಿಯ ಅಚಾತುರ್ಯಕ್ಕೆ ಬಲಿಯಾದ ವ್ಯಕ್ತಿ. ಮೆಹಬೂಬ್ ಭಾರತೀಯ ಪ್ರಜೆ ಎನ್ನುವುದನ್ನು ಸಾಬೀತು ಪಡಿಸಲು ಮೂಲ ದಾಖಲೆಗಳನ್ನು ಸಲ್ಲಿಸಿದರೂ ಕೂಡ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ, ವಲಸೆ ಕಾರ್ಮಿಕ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇತ್ತೀಚಿಗೆ ಕೆಲಸಕ್ಕೆಂದು ಬೇರೆ ಬೇರೆ ದೇಶಗಳಿಂದ ಬಂದು ನಕಲಿ ದಾಖಲೆಗಳನ್ನು ನೀಡಿ ಪೌರತ್ವ ಪಡೆಯುತ್ತಿರುವವರ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯ ಪೊಲೀಸರು ಮತ್ತು ಗಡಿಭದ್ರತಾ ಪಡೆಯವರು (BSF) ಶ್ರಮಿಸುತ್ತಲೇ ಇದ್ದಾರೆ. ಮೆಹಬೂಬ್ ಪಶ್ಚಿಮ ಬಂಗಾಳದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕಾಗಿ ಬಂದಿದ್ದ ವೇಳೆ, ಅಲ್ಲಿನ ಪೊಲೀಸರು ಅವರನ್ನು ಬಂಧಿಸಿ, ಗಡಿ ಭದ್ರತಾ ಪಡೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಅವರನ್ನು ಅಕ್ರಮ ಬಾಂಗ್ಲಾ ವಲಸಿಗ ಎಂದು ತಪ್ಪಾಗಿ ಅರ್ಥೈಸಿಕೊಂಡು ಬಾಂಗ್ಲಾದೇಶಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ವ್ಯಕ್ತಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಭಾಗಬಂಗೋಲಾ ತಾಲ್ಲೂಕಿನ ಮಹಿಸಸ್ಥಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸೈನನಗರ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ವರಿಷ್ಠರು ತಮ್ಮ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಮೆಹಬೂಬ್ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಲು ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆಧಾರ್ ಹಾಗೂ ಪ್ಯಾನ್ ಕಾರ್ಡ್ ಮಾತ್ರ ಪೌರತ್ವಕ್ಕೆ ಮೂಲ ದಾಖಲೆ ಅಲ್ಲ. ಏಕೆಂದರೆ ಅವು ಸುಳ್ಳು ಮಾಹಿತಿ ನೀಡಿ ಪಡೆಯಬಹುದಾದ ದಾಖಲೆಗಳಾಗಿವೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Shocking News: ಹುಡುಗಿಯರ ಅಕ್ರಮ ಸಾಗಾಟ ಜಾಲ ಪತ್ತೆ ಹಚ್ಚಿದ ಯುವಕ, ಕೇಡಿಗಳಿಂದ ಬೆದರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ
ಏನಿದು ಘಟನೆ?
ಮೆಹಬೂಬ್ ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿಯೇ ಕೆಲಸ ಮಾಡುತ್ತಿದ್ದು, ಮುಂಬೈ ಸಮೀಪದ ಮಿರಾ ರೋಡ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಈ ವ್ಯಕ್ತಿಯ ಬಗ್ಗೆ ಪೋಲಿಸರಿಗೆ ಅನುಮಾನ ಕಂಡುಬಂದಿದೆ. ತಕ್ಷಣವೇ ಬಂಧಿಸಿ ಕನಾಕಿಯಾ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಅವನ ಕುಟುಂಬಸ್ಥರಿಂದ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಾಗೂ ಪಂಚಾಯಿತಿ ಮಾನ್ಯತೆಯ ಕುಟುಂಬದ ವಂಶಾವಳಿ ದಾಖಲೆಗಳನ್ನು ಪಡೆದು ತನಿಖೆ ನಡೆಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಜೂನ್ 14ರಂದು ಶೇಖ್ ತನ್ನ ಸಂಬಂಧಿಯೊಬ್ಬರಿಗೆ ಫೋನ್ ಮಾಡಿ ನನ್ನನ್ನು ಇಂದು ಬೆಳಗ್ಗೆ 3:30ಕ್ಕೆ ಬಿಎಸ್‌ಎಫ್ ಬಾಂಗ್ಲಾದೇಶದೊಳಗೆ ತಳ್ಳಿದ್ದಾರೆ ಎಂದು ತಿಳಿಸಿದ್ದಾರೆ. ಮೆಹಬೂಬ್‌ಗೆ ಮೂರು ಜನ ಮಕ್ಕಳಿದ್ದಾರೆ. ಮೆಹಬೂಬ್ ಕುಟುಂಬಸ್ಥರು ಆತನನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಆಗ್ರಹಿಸುತ್ತಿದ್ದಾರೆ.