ಬೆಂಗಳೂರು: ನಟಿ ರಚಿತಾ ರಾಮ್ ವಿರುದ್ಧ ಕಲಾವಿದರ ಸಂಘ ಮತ್ತು ಫಿಲ್ಮ್ ಚೇಂಬರ್ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದು ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾದ ನಿರ್ದೇಶಕ ನಾಗಶೇಖರ್ (Nagashekar) ಒತ್ತಾಯಿಸಿದ್ದಾರೆ. ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಂಗಳವಾರ ತೆರಳಿದ್ದ ನಾಗಶೇಖರ್, ತಮ್ಮದೇ ಸಿನಿಮಾದ ನಾಯಕಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ಸಲ್ಲಿಸಿದರು. ರಚಿತಾ ರಾಮ್ ಅವರಿಂದ ಆಗಿರುವ ತೊಂದರೆ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ನಂತರ ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ಭಾಗಿಯಾಗಿಲ್ಲ. ಹಾಗಾಗಿ ನಟಿಯ ನಡೆಯ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದ್ದು, ನಟಿ ಕಠಿಣ ಕ್ರಮ ತೆಗೆದುಕೊಳ್ಬೇಕು ಅಂತ ಆಗ್ರಹಿಸುತ್ತೇವೆ ಎಂದಿದ್ದಾರೆ.
ನಮ್ಮ ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್ ಸ್ವಲ್ಪವೂ ಸಪೋರ್ಟ್ ಕೊಟ್ಟಿಲ್ಲ. ರಾಕ್‌ಲೈನ್ ವೆಂಕಟೇಶ್ ಅವರು ಮನವೊಲಿಸಲು ಪ್ರಯತ್ನಿಸಿದರೂ ರಚಿತಾ ಒಪ್ಪಿಲ್ಲ. ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ. ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರೂ ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥವ್ರೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ. ನಾವು ಪೇಮೆಂಟ್ ಕಮ್ಮಿ ಕೊಟ್ಟಿಲ್ಲ. ನಟಿ ರಚಿತಾ ರಾಮ್ ವಿರುದ್ಧ ಹಾಗೂ ಕನ್ನಡ ಸಿನಿಮಾಗೆ ಥಿಯೇಟರ್ ಸಮಸ್ಯೆ ಕುರಿತು ತುಂಬಾ ನಷ್ಟ ಅನುಭವಿಸಿದ್ದೇವೆ ಅಂತ ಫಿಲ್ಮ್ ಚೇಂಬರ್ಗೆ ನಿರ್ದೇಶಕ ನಾಗಶೇಖರ್ ಮತ್ತು ನಟ ಶ್ರೀನಗರ ಕಿಟ್ಟಿ ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bollywood Movie: ಓಟಿಟಿಯಲ್ಲಿ ಲಭ್ಯವಿದ್ದರೂ ಕುಟುಂಬ ಸಮೇತ ವೀಕ್ಷಿಸಲು ಸೂಕ್ತವಲ್ಲದ ಬಾಲಿವುಡ್ ಸಿನಿಮಾಗಳಿವು
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ ಸಂಜು ವೆಡ್ಸ್ ಗೀತಾ 2 ಸಿನಿಮಾ ಮೂಡಿ ಬಂದಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಛಲವಾದಿ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಸೇರಿ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.