ಬೆಂಗಳೂರು: ಸಿನಿಮಾ ಪ್ರಚಾರಕ್ಕೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಸಂಜು ವೆಡ್ಸ್ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಫಿಲ್ಮ್ ಚೇಂಬರ್‌ಗೆ ದೂರು ನೀಡಿದ ಬೆನ್ನಲ್ಲೇ ನಟಿ ರಚಿತಾ ರಾಮ್ (Actress Rachita Ram) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಅಡ್ವಾನ್ಸ್ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆಂದು ನಟಿ ವಿರುದ್ಧ ಆರೋಪ ಕೇಳಿಬಂದಿದೆ. ‘ಉಪ್ಪಿ ರುಪ್ಪಿ’ ಸಿನಿಮಾಗಾಗಿ ನಟಿ ರಚಿತಾ ರಾಮ್‌ಗೆ ಅಡ್ವಾನ್ಸ್ ನೀಡಲಾಗಿತ್ತು. ಈಗ ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದಾರೆ ಆರೋಪಿಸಿ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ದೂರು ನೀಡಿದ್ದಾರೆ.
8 ವರ್ಷಗಳ ಹಿಂದೆ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಸಿನಿಮಾ ಸಿದ್ಧವಾಗಬೇಕಿತ್ತು. ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಆ ಸಿನಿಮಾಗೆ ಕೆ. ಮಾದೇಶ್ ನಿರ್ದೇಶನ ಮಾಡುತ್ತಿದ್ದರು. ಆ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಒಪ್ಪಿಕೊಂಡಿದ್ದರು. 23 ಲಕ್ಷ ರೂಪಾಯಿ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ಅವರು ಮುಂಗಡವಾಗಿ 13 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.
2017ರಲ್ಲಿ ಬ್ಯಾಂಕಾಕ್ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅಲ್ಲಿಗೆ ಬರುವುದಾಗಿ ರಚಿತಾ ರಾಮ್ ಒಪ್ಪಿಕೊಂಡಿದ್ದರು. ನಟಿಗಾಗಿ ವಿಮಾನದ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಈಗ ಬರ್ತೀನಿ ಆಗ ಬರ್ತೀನಿ ಅಂತ 15 ದಿನಗಳ ಕಾಲ ರಚಿತಾ ರಾಮ್ ಆಟ ಆಡಿಸಿದರು. ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ರಚಿತಾಗಾಗಿ ಎರಡು ವಾರಗಳ ಕಾಲ ಪ್ರತಿ ದಿನ ಟಿಕೆಟ್ ಬುಕ್ ಮಾಡಿ ಕಾದಿದ್ದರು. ಕಡೆಗೂ ರಚಿತಾ ರಾಮ್ ಬರಲೇ ಇಲ್ಲ. ಬೇರೆ ಆಯ್ಕೆ ಇಲ್ಲದೇ, ಕೇವಲ ಹೀರೋ ದೃಶ್ಯಗಳ ಚಿತ್ರೀಕರಣವನ್ನು ಮಾಡಿಕೊಂಡು ಚಿತ್ರತಂಡ ವಾಪಸ್ ಆಗಿತ್ತು.
ರಚಿತಾ ಕಾರಣದಿಂದ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ಒಂದೂವರೆ ಕೋಟಿ ರೂಪಾಯಿ ಕಳೆದುಕೊಂಡರು. ಮೈಸೂರಿನಲ್ಲಿ ನಡೆದ ಚಿತ್ರೀಕರಣಕ್ಕೆ ರಚಿತಾ ರಾಮ್ ಒಂದು ದಿನ ಮಾತ್ರ ಬಂದಿದ್ದರು. ಹೀಗಾಗಿ ರಚಿತಾ ಕಾರಣದಿಂದ ‘ಉಪ್ಪಿ ರುಪ್ಪಿ’ ಅರ್ಧಕ್ಕೆ ನಿಂತು ಹೋಯಿತು. ಶೇ.35ರಷ್ಟು ಸಿನಿಮಾ ಮಾತ್ರ ಸಿದ್ಧವಾಯಿತು. ಉಳಿದ ಕೆಲಸವೂ ಆಗಲಿಲ್ಲ, ನಿರ್ಮಾಪಕರಿಗೆ ಹಣವೂ ಸಿಗಲಿಲ್ಲ. ಅಂದಿನಿಂದ ನಿರ್ಮಾಪಕರ ಸಂಪರ್ಕಕ್ಕೆ ಸಿಗದೇ ರಚಿತಾ ರಾಮ್ ಸತಾಯಿಸುತ್ತಿದ್ದಾರೆ. ಕೊನೆಯದಾಗಿ ಫಿಲ್ಮ್ ಚೇಂಬರ್‌ಗೆ ನಿರ್ಮಾಪಕಿ ದೂರು ನೀಡಿದ್ದಾರೆ. 2 ತಿಂಗಳ ಹಿಂದೆಯೇ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.