Karunadu Studio

ಕರ್ನಾಟಕ

Keshava Prasad B Column: ರಾಬರ್ಟ್‌ ಕಿಯೊಸಾಕಿ ಹೇಳಿದ ಮನಿ – ಮಂತ್ರಗಳಿಗೆ ಕಿವಿಗೊಡಿ ! – Kannada News | Listen to the money mantras of Robert Kiyosaki!


ಮನಿ ಮೈಂಡೆಡ್

keshavaprasadbk@gmail.com

ರಿಚ್ ಡ್ಯಾಡ್ ಪೂರ್ ಡ್ಯಾಡ್’- 2000ದ ವರ್ಷದಲ್ಲಿ ಈ ಕೃತಿಯನ್ನು ಬರೆದ ಲೇಖಕ ರಾಬರ್ಟ್ ಕಿಯೊಸಾಕಿ, ಬಳಿಕ ಜಗದ್ವಿಖ್ಯಾತರಾದರು. ಈ ಪುಸ್ತಕದ 3 ಕೋಟಿ 20 ಲಕ್ಷ ಪ್ರತಿಗಳು ಇದುವರೆಗೆ ಮಾರಾಟವಾಗಿವೆ ಎಂದರೆ ಇದರ ಜನಪ್ರಿಯತೆಯನ್ನು ಊಹಿಸಿ. ಇದು 51 ಭಾಷೆಗಳಿಗೆ ಅನುವಾದ ವಾಗಿದ್ದು, 109 ರಾಷ್ಟ್ರಗಳಲ್ಲಿ ಮಾರಾಟವಾಗಿದೆ.

ರಾಬರ್ಟ್ ಕಿಯೊಸಾಕಿ ಇತ್ತೀಚೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಂದು ಪೋಸ್ಟ್ ಮಾಡಿದ್ದರು- “ನೀವು ಈ ಎರಡು ನಿಯಮಗಳನ್ನು ಮುರಿಯುತ್ತಿದ್ದೀರಾ…?” ಬಹುತೇಕ ಜನರು ಈ ಎರಡು ಮಹತ್ವದ ನಿಯಮಗಳನ್ನು ಮುರಿಯುವುದರಿಂದ ಬಡವರಾಗಿ ಉಳಿಯುತ್ತಾರೆ. ಮೊದಲ ನಿಯಮ: ಕೆಟ್ಟ ಹಣ ವ್ಯವಸ್ಥೆಯನ್ನು ಪ್ರವೇಶಿಸುವಾಗ, ಒಳ್ಳೆಯ ಹಣ ಕಣ್ಮರೆಯಾಗುತ್ತದೆ. ಎರಡನೇ ನಿಯಮ: ನೆಟ್‌ವರ್ಕ್.

ಏನಿದು ಒಳ್ಳೆಯ ಹಣ ಮತ್ತು ಕೆಟ್ಟ ಹಣ ಎಂದು ನೀವು ಕೇಳಬಹುದು. ಅದನ್ನೂ ರಾಬರ್ಟ್ ಕಿಯೊಸಾಕಿ ವಿವರಿಸಿದ್ದಾರೆ. “ನೋಡಿ, ನೀವು ನಿಮ್ಮ ಸಂಬಳ ಅಥವಾ ಆದಾಯವಾಗಿ ಸಿಗುವ ಹಣದಲ್ಲಿ ಒಂದಷ್ಟನ್ನು ಉಳಿತಾಯ ಮಾಡಬಹುದು. ಆದರೆ ಅಷ್ಟಕ್ಕೇ ಸೀಮಿತರಾಗುವುದರಿಂದ ಪ್ರಯೋಜನವಾಗುವುದಿಲ್ಲ. ಅದು ನಿಜವಾದ ಹಣವಲ್ಲ.

ಬ್ಯಾಂಕ್ ಖಾತೆಯ, ಮನೆಯ ಬೀರುವಿನ ಇಡುವ ನಗದು ಠೇವಣಿಗಳು ಕಾಲಕ್ರಮೇಣ ತಮ್ಮ ಮೌಲ್ಯ‌ ವನ್ನು ಕಳೆದುಕೊಳ್ಳುವುದರಿಂದ ಅವು ಒಳ್ಳೆಯ ಹಣವಲ್ಲ. ನಿಜವಾದ ಹಣವೆಂದರೆ ವೇಗವಾಗಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಚಿನ್ನ, ಬೆಳ್ಳಿ, ಬಿಟ್ ಕಾಯಿನ್” ಎನ್ನುತ್ತಾರೆ ರಾಬರ್ಟ್ ಕಿಯೊಸಾಕಿ (ಬಿಟ್ ಕಾಯಿನ್ ಎಂದರೆ ಕ್ರಿಪ್ಟೊ ಕರೆನ್ಸಿ.

ಇದನ್ನೂ ಓದಿ: Keshav Prasad B Column: ಭಾರತದ ರಕ್ಷಣೆಗೆ ದೇವರು ಕಳಿಸಿದ ತೆರಿಗೆ ಜಿಎಸ್‌ಟಿ !

ಇದಕ್ಕೆ ನಿಷೇಧ ಇಲ್ಲದಿದ್ದರೂ, ಆರ್‌ಬಿಐ ಮಾನ್ಯತೆ ಇರುವುದಿಲ್ಲ). ಅಂದ್ರೆ ವೃಥಾ ಉಳಿತಾಯ ಮಾಡಿ ಇಡುವ ಹಣ ಬೆಳೆಯುವುದಿಲ್ಲ. ಅದು ಅಸಲಿ ಹಣವಾಗುವುದಿಲ್ಲ. ಆದರೆ ಚಿನ್ನ, ಬೆಳ್ಳಿಯ ರೂಪದಲ್ಲಿ ಇಡುವ ಹಣದ ಮೌಲ್ಯ ಬೆಳೆಯುತ್ತದೆ. ಅದು ಅಸಲಿ ಹಣ ಎನ್ನುತ್ತಾರೆ ರಾಬರ್ಟ್ ಕಿಯೊಸಾಕಿ.

ಎರಡನೆಯ ನಿಯಮ ನೆಟ್‌ವರ್ಕ್. ಉದಾಹರಣೆಗೆ ಮೆಕ್ ಡೊನಾಲ್ಡ್ ಒಂದು ಫ್ರಾಂಚೈಸಿ ನೆಟ್‌ ವರ್ಕ್. ಆದರೆ ನಿಮ್ಮ ಮನೆಗೆ ಸಮೀಪದ ಕಿರಾಣಿ ಅಂಗಡಿ ಅಲ್ಲ. ಆದ್ದರಿಂದ ದಿನಸಿ ಅಂಗಡಿ ಯವರು ಅ ಉಳಿದುಕೊಂಡಿದ್ದರೆ, ಬಡವರಾಗಿಯೇ ಇರಬೇಕಾಗುತ್ತದೆ. ಫೆಡೆಕ್ಸ್ ಎಂದರೆ ನೆಟ್‌‌ ವರ್ಕ್. ಆದರೆ ಒಂದು ಲಾರಿಯನ್ನು ಮಾತ್ರ ಹೊಂದಿರುವವರು ನೆಟ್‌ವರ್ಕ್ ಮಾಲೀಕರಲ್ಲ. ಆದ್ದರಿಂದ ಒಳ್ಳೆಯ ಹಣದಲ್ಲಿ ಹೂಡುವುದು ಮತ್ತು ನೆಟ್‌ವರ್ಕ್ ನಡೆಸುವ ನಿಯಮವನ್ನು ಪಾಲಿಸಿದರೆ ಮಾತ್ರ ಸಿರಿವಂತರಾಗಬಹುದು ಎಂದು ವ್ಯಾಖ್ಯಾನಿಸುತ್ತಾರೆ ರಾಬರ್ಟ್ ಕಿಯೊಸಾಕಿ.

ಸಂಪತ್ತಿನ ಸೃಷ್ಟಿಯಲ್ಲಿ ನೆಟ್‌ವರ್ಕ್ ಪರಿಣಾಮಕಾರಿ. ನೆಟ್ ವರ್ಕ್‌ನ ಬಳಕೆದಾರರು ಹೆಚ್ಚಿದಂತೆ ಅದರ ಮೌಲ್ಯವೂ ಹೆಚ್ಚುತ್ತಾ ಹೋಗುತ್ತದೆ. ಮೆಕ್ ಡೊನಾಲ್ಡ್ ಮತ್ತು ಫೆಡೆಕ್ಸ್ ನ ಉದಾಹರಣೆ ಯನ್ನು ಕಿಯೊಸಾಕಿ ಇದಕ್ಕಾಗಿ ಮುಂದಿಡುತ್ತಾರೆ. ನೆಟ್‌ವರ್ಕ್ ಪ್ರಬಲವಾದಾಗ, ಏಕಾಂಗಿ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕುವುದು ಕಷ್ಟವಾಗುವುದಿಲ್ಲ. ಹೆಚ್ಚು ಹಣ ಮಾಡಬೇಕಿದ್ದರೆ ನೆಟ್‌ವರ್ಕ್ ಮಾರ್ಕೆಟಿಂಗ್‌ನ ಶಕ್ತಿ ಮತ್ತು ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು.

ನೆಟ್‌ವರ್ಕಿಂಗ್ ಮಾರ್ಕೆಟ್ ಎಂದರೆ ಕೇವಲ ನೀವೊಬ್ಬರೇ ಸಂಪಾದಿಸುವುದಲ್ಲ, ಬೇರೆಯವರೂ ಶ್ರೀಮಂತರಾಗಲು, ಆಸ್ತಿಯನ್ನು ಹೆಚ್ಚಿಸಿಕೊಳ್ಳಲು ನೀವು ನೆರವಾಗುವುದಾಗಿದೆ. ಹಾಗಾದರೆ ಎಲ್ಲರಿಗೂ ನೆಟ್‌ವರ್ಕ್ ಮಾಡಲು ಸಾಧ್ಯವೇ? ವಿಜಯ ಸಂಕೇಶ್ವರರು ಒಂದು ಲಾರಿಯೊಂದಿಗೆ ಆರಂಭಿಸಿದ ಲಾಜಿಸ್ಟಿಕ್ಸ್ ಬಿಸಿನೆಸ್ ದೇಶದ ದೊಡ್ಡ ಉದ್ಯಮ ಸಮೂಹವಾಗಿ ಬೆಳೆದು ನಿಂತಿದೆ.

ಹಾಗಂತ ಎಲ್ಲರಿಗೂ ಸಾಧ್ಯವೇ? ಇಲ್ಲ. ಆದರೆ ಮೊದಲನೆಯದಾಗಿ, ಸ್ಪೂರ್ತಿ ಮತ್ತು ಪ್ರೇರಣೆ ಎಲ್ಲರಿಗೂ ಬದುಕಿನಲ್ಲಿ ಯಾವುದೇ ಸಾಧನೆಯ ಪಥದಲ್ಲಿ ಮುನ್ನಡೆಯಲು ಅವಶ್ಯಕ. ಎರಡನೆ ಯದಾಗಿ, ಹೆಚ್ಚು ಸಂಪತ್ತು ಗಳಿಸಲು ಅದರದ್ದೇ ಆದ ನಿಯಮಗಳ ಮೂಲಕವೇ ಸಾಧ್ಯ. ಈ ದೃಷ್ಟಿ ಯಿಂದ ರಾಬರ್ಟ್ ಕಿಯೊಸಾಕಿಯ ತತ್ತ್ವಗಳು ಆಕರ್ಷಿಸುತ್ತವೆ.

ರಾಬರ್ಟ್ ಕಿಯೊಸಾಕಿಯವರು 2013ರಲ್ಲಿ ‘ರಿಚ್ ಡ್ಯಾಡ್ಸ್ ಪ್ರೊಫೆಸಿ’ ಎಂಬ ಪುಸ್ತಕವನ್ನು ಪ್ರಕಟಿಸಿ ದ್ದರು. ಅದರಲ್ಲಿ ಸಮಕಾಲೀನ ವಿಶ್ವ ಆರ್ಥಿಕತೆಯ ಭವಿಷ್ಯದ ಬಗ್ಗೆ ಬರೆದಿದ್ದರು. ಜಾಗತಿಕ ಆರ್ಥಿ ಕತೆಯಲ್ಲಿ 2025 ಗಮನಾರ್ಹ ಪಲ್ಲಟದ ವರ್ಷವಾಗಲಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಪ್ರವರ್ಧಮಾನಕ್ಕೆ ಬರಲಿದೆ. ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ. ‌

ಹಣದುಬ್ಬರದ ಪರಿಣಾಮ ನಿವೃತ್ತಿ ಜೀವನಕ್ಕಾಗಿ ಮಾಡುವ ಉಳಿತಾಯದ ಹಣ ಕರಗಲಿದೆ ಎಂಬ ಭಯಾನಕ ಭವಿಷ್ಯವನ್ನು ಕಿಯೊಸಾಕಿ ಬರೆದಿದ್ದರು. ಉದ್ಯೋಗ ಭದ್ರತೆಯ ಬಗ್ಗೆ ಸ್ವಘೋಷಿತ ತಜ್ಞರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಸಾಂಪ್ರದಾಯಿಕ ಶಿಕ್ಷಣವು ಉದ್ಯೋಗ ಭದ್ರತೆಯನ್ನು ಒದಗಿಸುವ ದಾರಿಯಾಗಿ ಇವತ್ತು ಉಳಿದಿಲ್ಲ. ಹಳೆಯ ನಂಬಿಕೆಗಳು ಈಗ ಕುರುಡಾಗಿದ್ದು, ಉತ್ತಮ ಹಣಕಾಸು ಮಾರ್ಗದರ್ಶನ ನೀಡುವ ಹೊಸತನದ ಶಿಕ್ಷಕರನ್ನು ಕಂಡು ಕೊಳ್ಳಬೇಕು ಎನ್ನುತ್ತಾರೆ ಕಿಯೊಸಾಕಿ.

ಬಡವರು ದರದ ಬಗ್ಗೆ ಚಿಂತಿಸುತ್ತಾರೆ. ಶ್ರೀಮಂತರು ತಮ್ಮಲ್ಲಿ ಎಷ್ಟಿದೆ, ಎಷ್ಟು ಬೇಕಿದೆ ಎಂಬ ಪ್ರಮಾಣದ ಬಗ್ಗೆ ಯೋಚಿಸುತ್ತಾರೆ. ಈಗಿನ ಜಗತ್ತಿನಲ್ಲಿ ಉಳಿಯಬೇಕು ಎಂದಿದ್ದರೆ ಚಿನ್ನ, ಬೆಳ್ಳಿ ಮತ್ತು ಬಿಟ್ ಕಾಯಿನ್‌ನಂಥ ಆಸ್ತಿಗಳಲ್ಲಿ ಹೂಡಿಕೆಯನ್ನು ಮಾಡಿರಿ. ಇವುಗಳ ದರಕ್ಕಿಂತಲೂ ಇವುಗಳ ಪ್ರಮಾಣ ಹೆಚ್ಚು ಮುಖ್ಯವಾಗುತ್ತಿದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಇವುಗಳನ್ನು ಖರೀದಿಸಿ ಎನ್ನುತ್ತಾರೆ ಕಿಯೊಸಾಕಿ.

ಬಿಟ್ ಕಾಯಿನ್ ಬೆಲೆ 6000 ಡಾಲರ್ ಇದ್ದಾಗ ಅವರು ಖರೀದಿಸಿದ್ದರು. 2030ರ ವೇಳೆಗೆ ಇದರ ಬೆಲೆ 10 ಲಕ್ಷ ಡಾಲರ್‌ಗೆ ಜಿಗಿಯಬಹುದು ಎಂಬುದು ಅವರ ನಂಬಿಕೆ. ಇಂಥ ಆಸ್ತಿಗಳ ಪ್ರಮಾಣವನ್ನು ಹೆಚ್ಚು ಹೆಚ್ಚು ಹೊಂದುವುದೇ ಭವಿಷ್ಯದ ಸಂಪತ್ತನ್ನು ಗಳಿಸುವ ಮಾರ್ಗವಾಗಿದೆ. ಈಗ ಚಿನ್ನ ಮತ್ತು ಬೆಳ್ಳಿಗೆ ದರ ಎಷ್ಟಿದೆ ಎಂದು ಬಿಲ್‌ಕುಲ್ ಆಲೋಚಿಸದಿರಿ. ಎಷ್ಟಿದ್ದರೂ ಕೊಂಡುಕೊಳ್ಳಿ. ಏಕೆಂದರೆ ಭವಿಷ್ಯದಲ್ಲಿ ಅದರ ಮೌಲ್ಯ ಹಲವಾರು ಪಟ್ಟು ಹೆಚ್ಚುವುದು ನಿಶ್ಚಿತ.

ಆದ್ದರಿಂದ ಎಷ್ಟು ಪ್ರಮಾಣದಲ್ಲಿ ಖರೀದಿಸಬಹುದು ಎನ್ನುವುದರ ಬಗ್ಗೆ ಗಮನ ಕೊಡಿ ಎನ್ನುತ್ತಾರೆ ಕಿಯೊಸಾಕಿ. ಈಗಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅವರಲ್ಲಿ ಹತಾಶೆಯಿದೆ. “ಹಣದುಬ್ಬರ ಮತ್ತು ಉದ್ಯೋಗ ನಷ್ಟದ ಪರಿಣಾಮ ನಕಲಿ ಹಣದ ಯುಗ ಅಂತ್ಯವಾಗುತ್ತಿದೆ. ಜನ ಈಗ ಎಚ್ಚೆತ್ತುಕೊಳ್ಳ ಬೇಕಿದೆ.

ಸಾಂಪ್ರದಾಯಿಕ ಕರೆನ್ಸಿಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಜನ ಈಗ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಿದ್ದರೆ, ಚಿನ್ನ, ಬೆಳ್ಳಿ, ರಿಯಲ್ ಎಸ್ಟೇಟ್, ಬಿಟ್ ಕಾಯಿನ್ ಮೊದಲಾದ ನಿಜವಾದ ಆಸ್ತಿಗಳಲ್ಲಿ ಹೂಡಿಕೆ ಮಾಡುವುದೇ ಏಕೈಕ ದಾರಿ. ಕೇವಲ ಬ್ಯಾಂಕ್ ಖಾತೆಯಲ್ಲಿ ಇಟ್ಟ ಕರೆನ್ಸಿಯೊಂದನ್ನೇ ನೆಚ್ಚಿಕೊಳ್ಳದಿರಿ.

ಹಣಕಾಸು ವಿಷಯಗಳ ಬಗ್ಗೆ ಸಾಕಷ್ಟು ತಿಳಿವಳಿಕೆಯನ್ನು ಸಂಪಾದಿಸಿ. ಶ್ರೀಮಂತರು ಯಾವಾ ಗಲೂ ದರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಪ್ರಮಾಣದ ( Quantity) ಬಗ್ಗೆ ಮಾತ್ರ ಗಮನ ವನ್ನು ಕೇಂದ್ರೀಕರಿಸುತ್ತಾರೆ. ಆಲೋಚನೆಯ ವಿಧಾನದ ಈ ಬದಲಾವಣೆಯನ್ನು ತಂದುಕೊಳ್ಳಿ. ಕಾರ್ಯ ಪ್ರವೃತ್ತರಾಗಿ, ನಿಮ್ಮ ಭವಿಷ್ಯವನ್ನು ಸುಭದ್ರಪಡಿಸಿಕೊಳ್ಳಿ. ಈ ನಿಟ್ಟಿನಲ್ಲಿ ನಿಮಗೆ ನಿಜವಾದ ಆಸ್ತಿ ಗಳ ಮೇಲೆ ನಿಯಂತ್ರಣ ಇರಬೇಕು. ಅವುಗಳನ್ನು ಪಡೆಯುವ ಧೈರ್ಯ, ಸ್ಥೈರ್ಯ ಮತ್ತು ಸ್ಪಷ್ಟತೆ ಇರಬೇಕು” ಎಂದು ಕಿಯಾಸಾಕಿ ವಿವರಿಸುತ್ತಾರೆ.

ಇತ್ತೀಚೆಗೆ ಒಂದು ರೀಲ್ಸ ಜಾಲತಾಣದಲ್ಲಿ ಹರಿದಾಡಿತ್ತು. ಅದರಲ್ಲಿ ಕಿಯೊಸಾಕಿ ಒಂದು ಕೈಯಲ್ಲಿ ಒಂದು ಬೆಳ್ಳಿ ನಾಣ್ಯ ಮತ್ತು ಇನ್ನೊಂದರಲ್ಲಿ ಕರೆನ್ಸಿ ನೋಟನ್ನು ಹಿಡಿದುಕೊಂಡು ಹೀಗೆನ್ನುತ್ತಾರೆ- “ನೋಡಿ, ಈ ಬೆಳ್ಳಿಯ ನಾಣ್ಯಕ್ಕೆ ಇಂದು 35 ಬಕ್ಸ್ (Bucks) ಇದೆ. ಆದರೆ ಇನ್ನೆರಡು ವರ್ಷದಲ್ಲಿ ಇದೇ ಬೆಳ್ಳಿಗೆ 100 ಬಕ್ಸ್ ಆಗಲಿದೆ. ಆದರೆ ಈಗ ಎರಡನ್ನೂ ಮುಂದಿಟ್ಟರೆ, ಬಹುಪಾಲು ಜನ 35 ಬಕ್ಸ್ ಅನ್ನೇ ಆಯ್ಕೆ ಮಾಡುತ್ತಾರೆ. ಇದು ದುಃಖದ ವಿಷಯ.

ನೀವು ಸುಮ್ಮನೆ ಫೇಕ್ ಮನಿಯನ್ನು ಇಟ್ಟುಕೊಳ್ಳುವುದಕ್ಕಿಂತ ಚಿನ್ನ, ಬೆಳ್ಳಿ, ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡುವುದರ ಮೂಲಕ ನಷ್ಟವನ್ನು ತಪ್ಪಿಸಿ. ನೀವು ಜಯಶಾಲಿಗಳಾಗಬಲ್ಲಿರಿ”. ಅಮೆರಿಕದ ಆರ್ಥಿಕತೆಗೆ ದೊಡ್ಡ ಹಿಂಜರಿತ ಸಂಭವಿಸಲಿದೆ. ಸ್ಟಾಕ್ ಮಾರ್ಕೆಟ್ ಭಾರಿ ಪತನಕ್ಕೀಡಾ ಗಲಿದೆ. ಇದನ್ನು ಜನ ಜಾಣ್ಮೆಯಿಂದ ಎದುರಿಸಬೇಕಾಗಿದೆ. ಅಮೆರಿಕದಲ್ಲಿ ದಾಖಲೆಯ ಕ್ರೆಡಿಟ್ ಕಾರ್ಡ್ ಸಾಲ, ಹೆಚ್ಚುತ್ತಿರುವ ನಿರುದ್ಯೋಗ, ನಿವೃತ್ತಿಯ ಉಳಿತಾಯ ಕ್ಷೀಣವಾಗುತ್ತಿದ್ದು, ಇದೆಲ್ಲವೂ ಮಹಾ ಆರ್ಥಿಕ ಹಿಂಜರಿತ ಸನ್ನಿಹಿತವಾಗುತ್ತಿರುವುದರ ಲಕ್ಷಣಗಳಾಗಿದೆ.

ಇದು 1930ರ ಗ್ರೇಟ್ ಡಿಪ್ರೆಶನ್‌ಗಿಂತಲೂ ಕಷ್ಟದ ಕಾಲವಾದೀತು ಎಂದು ಎಚ್ಚರಿಸುತ್ತಾರೆ ಕಿಯೊಸಾಕಿ. ನಮ್ಮಲ್ಲಿ ರಿಸರ್ವ್ ಬ್ಯಾಂಕ್ ಇದ್ದ ಹಾಗೆ ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬ್ಯಾಂಕ್ ಇದೆ. ಇದರ ಪ್ರಕಾರ ಅಮೆರಿಕನ್ನರು ತಮ್ಮ ಕ್ರೆಡಿಟ್ ಕಾರ್ಡ್‌ ಗಳಲ್ಲಿ ಹೊಂದಿರುವ ಒಟ್ಟು ಸಾಲದ ಬಾಕಿ ಮೊತ್ತವು ದಾಖಲೆಯ 1.21 ಲಕ್ಷ ಕೋಟಿ ಡಾಲರ್. ಆ ದೇಶದ ರಾಷ್ಟ್ರೀಯ ಸಾಲ 36 ಲಕ್ಷ ಕೋಟಿ ಡಾಲರ್.

ಹೀಗೆ ಆರ್ಥಿಕ ಹಿಂಜರಿತ ಸನ್ನಿಹಿತವಾಗಿರುವುದರಿಂದ ಎದುರಿಸಲೂ ಸಜ್ಜಾಗಬೇಕು. ನಿಮ್ಮ ಭವಿಷ್ಯ ಕ್ಕಾಗಿ ಇಂದೇ ಹೂಡಿಕೆಯನ್ನು ಮಾಡಿರಿ. ಸಮಯವನ್ನು ವ್ಯರ್ಥಪಡಿಸದಿರಿ. ನಿಮ್ಮ ಭವಿಷ್ಯಕ್ಕಾಗಿ ನೀವು ಇಂದು ಏನು ಮಾಡುತ್ತೀರಿ ಎಂಬುದು ನಿರ್ಣಾಯಕವಾಗುತ್ತದೆ.

“ನಾನು ಯಾರೊಬ್ಬರನ್ನೂ ಎಚ್ಚರಿಸುತ್ತಿದ್ದೇನೆ ಎಂದು ಭಾವಿಸದಿರಿ. ಆದರೆ ನಾನು 2013ರಲ್ಲಿ ಹೇಳಿರುವಂತೆ ಪತನದ ಇತಿಹಾಸ ಬರುತ್ತಿದೆ. ದುರದೃಷ್ಟವಶಾತ್ ನನ್ನ ಪೀಳಿಗೆಯ ಲಕ್ಷಗಟ್ಟಲೆ ಜನರು ಸ್ಟಾಕ್ ಮಾರ್ಕೆಟ್ ಮತ್ತು ಬಾಂಡ್ ಮಾರ್ಕೆಟ್‌ನ ಪತನದಿಂದ ದುಡ್ಡು ಕಳೆದುಕೊಳ್ಳ ಲಿದ್ದಾರೆ. ಗುಡ್ ನ್ಯೂಸ್ ಏನೆಂದರೆ, ರಚನಾತ್ಮಕವಾಗಿ ಹೂಡಿಕೆ ಮಾಡಿದವರು ಶ್ರೀಮಂತರಾಗ ಲಿದ್ದಾರೆ.

ಅಂಥ ಸಿರಿವಂತರಲ್ಲಿ ನೀವೂ ಇರಬೇಕು ಎಂದು ನಾನು ಬಯಸುತ್ತೇನೆ. ನಿಸ್ಸಂದೇಹವಾಗಿ ಷೇರು, ಬಾಂಡ್ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಗಳು ಪತನವಾಗಲಿದೆ. ಇದೇ ವೇಳೆ ಲಕ್ಷಾಂತರ ಮಂದಿ ಚಿನ್ನ, ಬೆಳ್ಳಿ ಮತ್ತು ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಲು ಧಾವಿಸಲಿದ್ದಾರೆ. ನಾಳೆ ಏನಾಗಿ ಬೆಳೆಯಲು ನೀವು ಬಯಸುತ್ತೀರಿ? ಸಿರಿವಂತನಾಗುವ ಆಯ್ಕೆಯನ್ನೇ ಮಾಡಿಕೊಳ್ಳಿ” ಎನ್ನುತ್ತಾರೆ ಅವರು.

ಕಿಯೊಸಾಕಿ ಇಷ್ಟೆ ಭವಿಷ್ಯ ಹೇಳಿರುವಾಗ ಅದರ ಲಕ್ಷಣಗಳು ಕಾಣಿಸುತ್ತಿವೆಯಾ? ಹೌದು! ಬಂಗಾರದ ದರ 10 ಗ್ರಾಂಗೆ 1 ಲಕ್ಷ ರುಪಾಯಿ ದಾಟಿದೆ! ಬೆಳ್ಳಿಯ ದರವೂ ಕೆ.ಜಿ.ಗೆ 1 ಲಕ್ಷದ ಗಡಿ ಮೀರಿದೆ. ಬಿಟ್ ಕಾಯಿನ್ ದರ ಕೂಡ ಕಳೆದ ಒಂದು ವರ್ಷದಲ್ಲಿ 54 ಲಕ್ಷದಿಂದ 91 ಲಕ್ಷ ರುಪಾಯಿಗೆ ಏರಿಕೆಯಾಗಿದೆ!



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »