Karunadu Studio

ಕರ್ನಾಟಕ

Narayana Poshitlu Column: ದಾವಣಗೆರೆ ಮಂಡಕ್ಕಿ ಮೆಣಸಿನಕಾಯಿ – Kannada News | Davanagere Mandakki Chilli


ನಾರಾಯಣ ಪೊಸ್ಹಿತ್ಲು

ನನ್ನ ಹುಟ್ಟೂರು ದಾವಣಗೆರೆಯು ಮಂಡಕ್ಕಿ ಮೆಣಸಿನಕಾಯಿಗೆ ಹೆಸರುವಾಸಿ. ವರ್ಷಗಳ ನಂತರ ದಾವಣಗೆರೆಯು ಬೆಣ್ಣೆ ದೋಸೆಗೆ ಪ್ರಸಿದ್ಧವಾಯಿತಾದರೂ ಮಂಡಕ್ಕಿ ಮೆಣಸಿನಕಾಯಿಯು ತನ್ನತನವನ್ನು ಕಳೆದುಕೊಳ್ಳಲಿಲ್ಲ. ಸಾಮಾನ್ಯವಾಗಿ ಎಣ್ಣೆ ತಿಂಡಿಗಳು ಸಂಜೆಯ ಚಹಾದ ಜೊತೆಗೆ ಜೋಡಿಯಾಗುತ್ತವೆ. ಸಂಜೆಯ ಹೊತ್ತಲ್ಲಿ ಮನೆಯವರೊಟ್ಟಿಗೋ, ಗೆಳೆಯರೊಟ್ಟಿಗೋ ಹೀಗೇ ಒಂದು ಪೊಟ್ಟಣ ಮಂಡಕ್ಕಿ, ಬಿಸಿ ಬಿಸಿ ಮೆಣಸಿನಕಾಯಿ ಬೋಂಡಾ, ಅಂಬಡೆ ತಿಂದು ಒಂದು ಮಸಾಲಾ ಚಹಾ ಕುಡಿದರೆ ಒಳ್ಳೆಯ ಲವಲವಿಕೆ!

ದಾವಣಗೆರೆಯಲ್ಲಿ ವ್ಯಾಪಾರ ವ್ಯವಹಾರ ಮುಗಿಸಿ ಬಂದವರು, ಸಂಜೆಯ ಹೊತ್ತು ನಿಧಾನವಾಗಿ ಕಾಲಾಡಿಸಿಕೊಂಡು ಮಿರ್ಚಿ ಮಂಡಕ್ಕಿ ಅಂಗಡಿಯ ಕಡೆ ಸೇರುತ್ತಾರೆ. ಲವತ್ತು ವರ್ಷಗಳ ಹಿಂದೆ ಹಳೇ ದಾವಣಗೆರೆಯ ವಿಜಯಲಕ್ಷ್ಮಿ ರಸ್ತೆಯಲ್ಲೊಂದು, ಚಾಮರಾಜಪೇಟೆ ಹತ್ತಿರ ಒಂದು, ಜಯದೇವ ಸರ್ಕಲ್ಲಿನಲ್ಲೊಂದು , ರಾಮ್ ಅಂಡ್ ಕೋ ಸರ್ಕಲ್ ಹತ್ತಿರ ಒಂದೆರಡು ಮಂಡಕ್ಕಿ ಮೆಣಸಿನಕಾಯಿ ಅಂಗಡಿಗಳಿದ್ದವು.

ಈಗ ಹೊಸ ಹೊಸ ಬಡಾವಣೆಗಳಲ್ಲಿ ಹಲವು ಖಾರ ಮಂಡಕ್ಕಿ – ಮೆಣಸಿನಕಾಯಿ ಅಂಗಡಿಗಳೂ ತೆರೆದುಕೊಂಡಿವೆ! ಆದರೂ ಮುಂಚೆ ಇದ್ದ ಅಂಗಡಿಗಳಲ್ಲಿ ಜನ ಕಿಕ್ಕಿರಿದು ತುಂಬಿರೋದನ್ನು ನೋಡಿದರೆ ಓಲ್ಡ್ ಈಸ್ ಗೋಲ್ಡ್ ಅನ್ನೋದು ದಾವಣಗೆರೆಯಲ್ಲಿ ಸಾಬೀತಾಗಿದೆ!

ಮಂಡಕ್ಕಿ ಮಿರ್ಚಿ ಅಂಗಡಿಯ ಒಳಕ್ಕೆ ಒಮ್ಮೆ ಹೊಕ್ಕು ಅಲ್ಲಿನ ಸೊಗಡು ಅನುಭವಿಸೋಣ ಬನ್ನಿ. ಹಗಲಿನ ಹನ್ನೊಂದು ಗಂಟೆ. ಒಳ ಹಣುಕಿ ನೋಡಿದರೆ ಒಬ್ಬರು ನೀರುಳ್ಳಿ ಸಿಪ್ಪೆ ಬಿಡಿಸುತ್ತಲೂ ಮತ್ತೊಬ್ಬರು ಕೊತ್ತಂಬರಿ ಹೆಚ್ಚುತ್ತಲೂ ಕುಳಿತಿದ್ದಾರೆ. ವ್ಯಾಪಾರ ರಾತ್ರಿಯೇ ಆದರೂ ತಯಾರಿ ಬೆಳಗಿನಿಂದಲೇ ಆಗಬೇಕು. ಅಡಿ, ಹೊರಗೆ ಆಟೋ ರಿಕ್ಷಾ ಬಂದು ನಿಂತಿದೆ. ಮಂಡಕ್ಕಿಯ ಚೀಲಗಳು, ಮೂರು ಚೀಲ ನೀರುಳ್ಳಿ , ಒಂದು ಚೀಲ ಮೆಣಸಿನಕಾಯಿ, ಕೊತ್ತಂಬರಿ, ನಿಂಬೆಹಣ್ಣು, ಕಡ್ಲೆ ಹಿಟ್ಟಿನ ಚೀಲ , ಎಣ್ಣೆ ಡಬ್ಬ, ಹುರಿಗಡಲೆ ಪುಡಿ ಎಲ್ಲ ಪದಾರ್ಥಗಳೂ ಬಂದು ಇಳಿದಿವೆ.

ಇದನ್ನೂ ಓದಿ: Narayana Yaji Column: ವಾಲಿವಧೆಗೊಂದು ಕಾಲಚೋದಿತ ಕಾರಣ: ರಾಜ ಶಾಸ್ತ್ರಾಧೀನ, ಶಾಸ್ತ್ರ ಧರ್ಮಾಧೀನ ಎಂದು ಸಾರಿದ ಪುರುಷೋತ್ತಮ

ಈ ಹೊತ್ತಲ್ಲಿ ಒಳಗೆ ಕಾಲಿಟ್ಟವರಿಗೆ ಕರಿದ ಎಣ್ಣೆಯ ಘಮವು, ಹಸಿ ತರಕಾರಿಯ ವಾಸನೆಯೊಂದಿಗೆ ಬೆರೆತುಯಾವುದೊ ಮದುವೆ ಮನೆಯ ಪಾಕಶಾಲೆ ಹೊಕ್ಕ ಅನುಭವವಾಗುತ್ತಿದೆ.

ಸಂಧ್ಯಾ ಸಮಯ

ಸಂಜೆ ಐದು ಘಂಟೆ ಆಗುತ್ತಿದ್ದಂತೆಯೇ, ಮೆಣಸಿನಕಾಯಿ ಬಜ್ಜಿ ಅಂಗಡಿಯ ಎರಡೂ ಬಾಗಿಲುಗಳು ತೆರೆದಿವೆ. ಮಿರ್ಚಿ ಅಂಗಡಿ ಗುರುತಿಸಲು ದೊಡ್ಡ ಬೋರ್ಡ್ ಬೇಕೇ ಬೇಕು ಅಂತೇನೂ ಇಲ್ಲ. ಅದಾಗಲೇ ಶಾಲೆಯ ಮಕ್ಕಳು ಇಲ್ಲಿ ಬಂದು ಮಂಡಕ್ಕಿ ರೆಡಿ ಇದೆಯಾ ಅಂತ ಕೇಳಿಕೊಂಡು ವಾಪಸಾಗುತ್ತಿದ್ದಾರೆ. ಅಂಗಡಿಯಲ್ಲಿಟ್ಟ ಕಪ್ಪು ಬಾಣಲೆಯಲ್ಲಿ ಎಣ್ಣೆ ಕೊತಕೊತನೇ ಕುದಿಯಲಾ ರಂಭಿಸಿದೆ. ಒಬ್ಬರು ಕಟ್ಟೆಗೆಯ ಸ್ಟೂಲಿನ ಮೇಲೆ ಕುಳಿತು ಒಂದೊಂದಾಗಿ ಮೆಣಸಿನಕಾಯಿಗೆ ಹಿಟ್ಟು ಹಚ್ಚಿ ಕಾದ ಎಣ್ಣೆಯಲ್ಲಿ ಇಳಿಬಿಡುತ್ತಿದ್ದರೆ ಇನ್ನೊಬ್ಬರು ಅಂಗಡಿಯ ಒಳಗೆ ಒಂದು ಹದಕ್ಕೆ ಕಡಲೆ ಹಿಟ್ಟು ಕಲಸಿ ಅದಕ್ಕೆ ಉಪ್ಪು ಸ್ವಲ್ಪ ಸೋಡಾಪುಡಿ ಬೆರೆಸುತ್ತಿದ್ದಾರೆ.

ಮಂಡಕ್ಕಿ ಚೀಲದ ಪಕ್ಕ ದೊಡ್ಡ ಹರಿವಾಣದಲ್ಲಿ ಕತ್ತರಿಸಿದ ಈರುಳ್ಳಿ ಗೋಪುರದಾಕಾರದಲ್ಲಿ ಕುಳಿತುಕೊಳ್ಳುತ್ತಿದೆ. ಸಂಜೆ ಐದೂವರೆ ಆಗುತ್ತಿದೆ, ಪಕ್ಕದ ರಸ್ತೆಯಲ್ಲಿನ ಮನೆಗಳ ಹೆಣ್ಣು ಮಕ್ಕಳು ಬಂದು ಐವತ್ತು ರೂಪಾಯಿಗೆ ಮಂಡಕ್ಕಿ ಮೆಣಸಿನಕಾಯಿ ಕಟ್ಟಿಸಿಕೊಂಡು ಬಿಸಿ ಬಿಸಿಯಾದ ಪೊಟ್ಟಣ ವನ್ನು ಆ ಕೈಗೂ ಈ ಕೈಗೂ ಬದಲಾಯಿಸಿಕೊಂಡು ಮನೆಯತ್ತ ನಡೆಯುತ್ತಿದ್ದಾರೆ.

ಅಂಗಡಿಯ ಫೋನ್ ಪೇ ಸದ್ದು ಮಾಡತೊಡಗಿದೆ. ಜನ ಒಬ್ಬೊಬ್ಬರಾಗಿ ಬಂದು ವ್ಯಾಪಾರ ಶುರು ಮಾಡಿದ್ದಾರೆ. “ಖಾರ ಮಂಡಕ್ಕಿ ಕೊಡಿ”, “ನರ್ಗೀಸ್ ಕೊಡಿ”, “ಮಸಾಲಾ ಮಂಡಕ್ಕಿ ಕೊಡಿ” “ ಮೆಣಸಿನಕಾಯಿ ಬೋಂಡಾ ಕೊಡಿ’ ಅನ್ಮೋ ಕಲರವದ ನಡುವೆ ಫೋನ್ ಪೇ ನಲ್ಲಿ ಎಪ್ಪತ್ತೈದು ರೂಪಾಯಿ ಸ್ವೀಕರಿಸಲಾಗಿದೆ ಅನ್ನುವ ಸುಮಧುರವಾಣಿ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ!

ಮಂಡಕ್ಕಿಯ ಹಲವು ರೂಪ

ಇಂಗ್ಲಿಷ್‌ನಲ್ಲಿ ಪಫ್ಡ್‌ ಡ್ ರೈಸ್ ಅಂತ ಕರೆಸಿಕೊಳ್ಳೋ ಮಂಡಕ್ಕಿಯು ಅದೆಷ್ಟು ಬಗೆಯ ರೂಪ ತಳೆಯುತ್ತಿದೆ ನೋಡಿ ಇಲ್ಲಿ. ಹಾಗೆ ನೋಡಿದರೆ ಹೊಟ್ಟೆ ಹಸಿದಾಗ ಬರೀ ಒಣ ಮಂಡಕ್ಕಿ ತಿಂದರೂ ರುಚಿಯೇ. ಹಾಗೆಯೇ ತಿಂದರೆ ಕರಮ್ ಕುರುಂ ಶಬ್ದ ಮಾಡುವ ಇದಕ್ಕೆ ಮಂಡಕ್ಕಿ, ಮುಂಡಕ್ಕಿ, ಮಂಡಾಳು, ಚುರ ಮುರಿ, ಕಳ್ಳೆ ಪುರಿ ಹೀಗೇ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಹೆಸರು. ಅಂಗಡಿಯವರು ಸ್ಟೀಲ್ ಡಬರಿಗೆ ಮಂಡಕ್ಕಿ ಹಾಕಿ ಅದಕ್ಕೆ ಮಸಾಲಾ ಹಾಕಿ ಡಬರಿಯನ್ನು ನಲವತ್ತೈದು ಡಿಗ್ರಿಗೆ ಬಗ್ಗಿಸಿ, ಸೌಟಿನಿಂದ ಗರ ಗರ ತಿರುಗಿಸುತ್ತಿದ್ದರೆ, ಅನಿಮೇಷನ್ ನಲ್ಲಿ ಫಾಸ್ಟ್ ಮೂವ್‌ಮೆಂಟ್ ನೋಡಿದಂತಾಗುತ್ತೆ. ಅವರ ಉದ್ದೇಶ ಕೈಚಳಕ ತೋರಿಸುವುದಲ್ಲ.

ತಮ್ಮ ಅಂಗಡಿಯ ಶುಚಿ ರುಚಿಯ ಮೇಲೆ ವಿಶ್ವಾಸವಿರಿಸಿ ಅಂಗಡಿಗೆ ಬಂದ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಕೇಳಿದ್ದನ್ನು ಒದಗಿಸುವುದು. ಅದಕ್ಕೆ ಅನುಕೂಲ ವಾಗುವಂತೆ ಬೇಕಾದ ಸಾಮಗ್ರಿ ಗಳನ್ನೆಲ್ಲ ಕೈ ಗೆಟಕುವಂತೆ ಇಟ್ಟುಕೊಂಡಿದ್ದಾರೆ. ಇದೀಗ ಬಂದ ಯಾರೋ ಹುಡುಗ “ಒಂದು ಖಾರಾ ಮಂಡಕ್ಕಿ” ಅನ್ನುತ್ತಿದ್ದಾನೆ. ಅಂಗಡಿಯವರು ಡಬರಿಗೆ ಲೋಟ ದಿಂದ ಎರಡು ಸಲ ಮಂಡಕ್ಕಿ ಹಾಕೋದು. ಮೇಲೆ ಖಾರ ಬೂಂದಿ, ದಪ್ಪ ಖಾರಾ, ಈರುಳ್ಳಿ ಮೆಣಸಿನಕಾಯಿ ಹಾಕೋದು ಮತ್ತೆ ಗರ ಗರ ಗರ… ಹಾಗೆಯೇ ಪುರಸೊತ್ತಿಲ್ಲದೇ ತ್ರಿಕೋನಾಕಾರದ ಪೇಪರ್ ಪೊಟ್ಟಣಕ್ಕೆ ಅದನ್ನು ಸುರುವಿ ಮೇಲೆ ಕೊತ್ತಂಬರಿ, ಕ್ಯಾರೆಟ್ ತುರಿ ಉದುರಿಸಿ ಕೊಡುತ್ತಿದ್ದಾರೆ.

ರುಚಿಯಾದ ಖಾರ ಮಂಡಕ್ಕಿ ರೆಡಿ. ಅಂಗಡಿಯವರು ಹಾಗೆಯೇ ಒಂದು ಸ್ಟೀಲ್ ಡಬ್ಬದಲ್ಲಿ ಎಣ್ಣೆಯಲ್ಲಿ ಕೆಂಪಗೆ ಕರಿದ ಈರುಳ್ಳಿ ಕರಿದ ಕಡ್ಲೆಬೀಜದ ಮಸಾಲೆ ಇಟ್ಟು ಕೊಂಡಿದ್ದಾರೆ. ಮಸಾಲಾ ಮಂಡಕ್ಕಿ ಅಂತ ಆರ್ಡರ್ ಬಂದರೆ ಸಾಕು ಇಂತಿಷ್ಟು ಒಣ ಮಂಡಕ್ಕಿ ಗೆ ಇಂತಿಷ್ಟು ಮಸಾಲಾ ಹಾಕಿ ಸ್ಟೀಲ್ ಡಬರಿಯಲ್ಲಿ ಗರ ಗರ ಮಾಡಿ ರುಚಿಯಾದ ಮಸಾಲಾ ಮಂಡಕ್ಕಿ ಮಾಡಿ ಕೊಡುತ್ತಿದ್ದಾರೆ.

ನರ್ಗಿಸ್ ಎಂದರೇನು?

ನರ್ಗೀಸ್ ಅನ್ನೋ ಪದ ಕೇಳಿದರೆ, ಹಿಂದಿ ಸಿನಿಮಾ ನಟಿಯ ಮುಖ ನೆನಪಾದೀತು! ಆದರೆ ದಾವಣ ಗೆರೆಯ ನಾಗರಿಕರಿಗೆ ನರ್ಗೀಸ್ ಅನ್ನೋ ಪದ ಕೇಳಿದ್ರೆ ತಕ್ಷಣ ಮಂಡಕ್ಕಿ ಪೊಟ್ಟಣ ಕಣ್ಣ ಮುಂದೆ ಬರುತ್ತೆ. ಕಾರಣ ಇಲ್ಲಿ ‘ನರ್ಗೀಸ್ ಮಂಡಕ್ಕಿ’ ಅನ್ನೋದು ಮಂಡಕ್ಕಿಯ ಒಂದು ವಿಧ. ಹಿಂದಿ ಚಿತ್ರ ರಂಗದಲ್ಲಿ ನರ್ಗೀಸ್ ಉಚ್ರಾಯ ಸ್ಥಿತಿಯಲ್ಲಿದ್ದಾಗ ದಾವಣಗೆರೆಯ ಒಂದು ಹೊಸ ರೀತಿಯ ಮಂಡಕ್ಕಿ ಮಿಶ್ರಣ ಕ್ಕೆ ನರ್ಗೀಸ್ ಅಂತ ಹೆಸರು ಬಂದದ್ದು ಅನಿಸುತ್ತೆ. ಆ ಹೆಸರನ್ನು ಯಾರು ಹೆಸರಿಸಿದರೋ ಗೊತ್ತಿಲ್ಲ ಆದರೆ ನರ್ಗೀಸ್ ಮಂಡಕ್ಕಿಯ ರುಚಿ ಅಮೋಘ.

ನರ್ಗೀಸ್ ಮಂಡಕ್ಕಿಯನ್ನು ತಯಾರಿಸಲು ಮೊದಲು ಮಸಾಲಾ ತಯಾರಿಸಿ ಇಟ್ಟುಕೊಳ್ಳುತ್ತಾರೆ. ಒಂದು ಪ್ರಮಾಣದಲ್ಲಿ ಕಡ್ಲೆಬೀಜ ಕರಿದು, ಹುರಿಗಡಲೆ, ಈರುಳ್ಳಿ – ಬೆಳ್ಳುಳ್ಳಿಯ ಒಗ್ಗರಣೆ ತಯಾರಿಸಿ, ಬಣ್ಣ ಮತ್ತು ಉತ್ತಮ ಘಮ ಬರುವದಕ್ಕೆ ಶುದ್ಧ ಅರಿಸಿಣ ಪುಡಿಯನ್ನು ಸೇರಿಸಿ ನಂತರ ಆ ಬಿಸಿ ಬಿಸಿ ಒಗ್ಗರಣೆಯನ್ನು ಬಾಣಲೆಯಲ್ಲಿಟ್ಟ ಮಂಡಕ್ಕಿಗೆ ಸರಿಯಾಗಿ ಬೆರೆಸಿ ಅದರ ಮೇಲೆ ಹುರಿಗಡಲೆಯನ್ನು ಬೆರಸುತ್ತಾರೆ. ಇದೆಲ್ಲ ಪದಾರ್ಥಗಳು ಇದ್ದರೂ ಒಳ್ಳೆಯ ರುಚಿ ಬರಲು ಎಲ್ಲದರ ಪ್ರಮಾಣ ಮುಖ್ಯ ಮತ್ತು ಕರಿಯುವಾಗ ಈರುಳ್ಳಿ ಕೆಂಪಗಾಗುವಂತೆ ನೋಡುವುದು ಮುಖ್ಯ.

ಇನ್ನೊಂದು ರಖಂ

ಮಂಡಕ್ಕಿ ವಗ್ಗರಣೆ ಅಂದ್ರೆ ನೆನೆಸಿದ ಮಂಡಕ್ಕಿಯಿಂದ ತಯಾರಿಸಿದ್ದು. ಇದಕ್ಕೆ ಮಂಡಕ್ಕಿಯನ್ನು ನೀರಲ್ಲಿ ನೆನೆಸುತ್ತಾರೆ ಮತ್ತೊಂದು ಕಡೆ ಎಣ್ಣೆಯಲ್ಲಿ ಕರಿಬೇವು, ಮೆಣಸಿನಕಾಯಿ, ಈರುಳ್ಳಿಯ ಒಗ್ಗರಣೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಈರುಳ್ಳಿ ಸ್ವಲ್ಪ ಕೆಂಪಗಾಗುವಂತೆ ಕರಿಯುವದರಿಂದಲೇ ಅದಕ್ಕೆ ಇಷ್ಟು ರುಚಿ ಬರೋದು. ನಂತರ ಅದೇ ಬಾಣಲೆಗೆ ಮುಂಚೆ ನೆನೆಸಿಟ್ಟ ಮಂಡಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡುತ್ತಾರೆ. ಈ ಹಂತದಲ್ಲಿ ನಿಂಬೆ ರಸ ಸೇರಿಸುತ್ತಾರೆ. ಈ ಎಲ್ಲ ಬೆಂದ ನಂತರ ಕೊತ್ತಂಬರಿ ಸೇರಿಸುವದರಿಂದ ಕೊತ್ತಂಬರಿಯ ತಾಜಾ ಸುವಾಸನೆ ಹಾಗೇಯೇ ಉಳಿಯು ತ್ತದೆ. ಅದಕ್ಕೆ ಹುರಿಗಡಲೆ ಪುಡಿ ಬೆರೆಸೋದರಿಂದ ಒಂದು ಒಳ್ಳೆಯ ರುಚಿ ಮತ್ತು ಘಮ ದೊರಕು ತ್ತದೆ.

ಇದರ ರುಚಿಯನ್ನು ಹೇಳಿ ಬಣ್ಣಿಸಲಾಗುವುದಿಲ್ಲ; ತಿಂದು ಅನುಭವಿಸಬೇಕು! ದಾವಣಗೆರಯಲ್ಲಿನ ಒಂದು ವಿಶೇಷ ಅಂದರೆ ಅಲ್ಲಿನ ಯಾವುದೇ ಹೋಟೆಲಿಗೆ ಹೋಗಿ ಮಂಡಕ್ಕಿ ಕೊಡಿ ಅಂದರೆ, ಮಂಡಕ್ಕಿಯ ಜತೆ, ಒಂದು ಮೆಣಸಿನಕಾಯಿಯನ್ನು ಹಾಕಿಯೇ ಕೊಟ್ಟುಬಿಡುತ್ತಾರೆ. ಖಾರವಾದ ಮೆಣಸಿನ ಕಾಯಿಯನ್ನು ಕಟುಂ ಎಂದು ಕಚ್ಚಿ ತಿನ್ನುವ ಅಭಿರುಚಿ ಅಲ್ಲಿನವರದ್ದು!

ಅದರ ಜೊತೆ ಗಮ್ಮೆನುವ ಕಡ್ಲೆಬೇಳೆ ವಡೆ, ಅಂಬೊಡೆ ತಿಂದರೆ ಅದೆಷ್ಟು ಖುಷಿ ಅಂತೀರ! ಬಿಸಿ ಬಿಸಿ ಅಂಬೊಡೆಯನ್ನು ಬಾಯಲ್ಲಿಟ್ಟಾಗಲಂತೂ ನಾಲಗೆಯ ರುಚಿಯ ಗ್ರಂಥಿಗಳಿಗೆ ಮುದ ನೀಡುವ, ಪುದೀನ , ಸಬ್ಬಸಿಗೆ, ಮೆಣಸಿನಕಾಯಿ, ಶುಂಠಿ, ಕೆಂಪಾಗುವವರೆಗೆ ಕರಿದ ನೀರುಳ್ಳಿಗಳು ಬಾಯಲ್ಲಿ ಸಿಕ್ಕುವದರಿಂದ ಒಂದು ತಿಂದರೆ ಇನ್ನೊಂದು ತಿನ್ನೋಣ ಅಂತ ಎಂಥವರಿಗೂ ಅನ್ನಿಸಿಬಿಡುತ್ತೆ!

ಕಾಯುವ ಎಣ್ಣೆ ಕಾಯುವ ಜನ

ಮೆಣಸಿನಕಾಯಿ ಬೋಂಡಾ (ಮಿರ್ಚಿ) ಇನ್ನೊಂದು ಜನಪ್ರಿಯ ರಖಂ. ಕುದಿಯುವ ಎಣ್ಣೆಯೊಳಗೆ ಮೆಣಸಿನಕಾಯಿ ಬಿಡುವುದೂ ಒಂದು ಕಲೆಯೇ ಸರಿ. ಸ್ವಲ್ಪ ಗಮನ ತಪ್ಪಿದರೆ ಕೈಗೆ ಎಣ್ಣೆ ಸಿಡಿಯುತ್ತೆ. ಮಿರ್ಚಿಯ ಒಂದು ಮುಖ ಬೆಂದ ಮೇಲೆ, ಎಲ್ಲ ಮಿರ್ಚಿಗಳನ್ನೂ ಮಗುಚಿ ಹಾಕುತ್ತಾರೆ. ಕುದಿಯುವ ಎಣ್ಣೆಯಲ್ಲಿ ಬುರ್ ಬುರನೇ ಬೇಯುವ ಮಿರ್ಚಿ ನೋಡೋದೇ ಒಂದು ಚೆಂದ. ಅಲ್ಲಿ ಕಾಯುತ್ತಾ ನಿಂತವರಿಗೆ ಅದೇ ಒಂದು ಟೈಮ್ ಪಾಸ್. ಕಾಯುತ್ತಾ ನಿಂತವರಿಗೆ, ತಮ್ಮ ಪೊಟ್ಟಣ ಕೈಗೆ ಬಂದ ತಕ್ಷಣ, ಗುಂಪಿನಿಂದ ಹೊರಬಂದು ಗೆಲುವಿನ ನಗೆ ನಗುತ್ತಿದ್ದಾರೆ. ಕೆಲವರು ಪಾರ್ಸೆಲ್ ಕಟ್ಟಿಸಿಕೊಂಡು ಮನೆಯತ್ತ ನಡೆಯುವರು! ಮನೆಯಲ್ಲಿರುವ ಮಡದಿ ಅಥವಾ ಕುಟುಂಬದ ಸದಸ್ಯರೊಂದಿಗೆ ರುಚಿ ರುಚಿ ಮಿರ್ಚಿ ತಿನ್ನುವ ಅನುಭವ ಅನುಪಮ!

(ಪ್ರತಿಕ್ರಿಯಿಸಿ: viramapost@gmail.com) )



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »