Karunadu Studio

ಕರ್ನಾಟಕ

HD Kumaraswamy: ಅಕ್ರಮ ಗಣಿಗಾರಿಕೆ; ಎಚ್.ಕೆ.ಪಾಟೀಲ್‌ ಪತ್ರ ಕಸದ ಬುಟ್ಟಿಗೆ ಹಾಕಿ: ಕುಮಾರಸ್ವಾಮಿ ಗುಡುಗು – Kannada News | HD Kumaraswamy Illegal mining Throw HK Patil letter in the trash says Union Minister HD Kumaraswamy


ನವದೆಹಲಿ: ಅಕ್ರಮ ಗಣಿಗಾರಿಕೆ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್‌ ಬರೆದಿರುವ ಪತ್ರವನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy)‌ ಗುಡುಗಿದ್ದಾರೆ. ನವದೆಹಲಿಯ ತಮ್ಮ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಕಾನೂನುಬಾಹಿರವಾಗಿ ಏಳು ಗಣಿ ಕಂಪನಿಗಳಿಗೆ ಅನುಮತಿ ನೀಡಿದ್ದರು. ಅದರ ಬಗ್ಗೆ ಏನು ಹೇಳುತ್ತೀರಿ ಎಚ್.ಕೆ.ಪಾಟೀಲರೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಹಾಗೂ ವಸತಿ ಇಲಾಖೆಯಲ್ಲಿ ಎದ್ದಿರುವ ಕಮೀಷನ್‌ ಮುಜುಗರದಿಂದ ಪಾರಾಗಲು ಎಚ್.ಕೆ. ಪಾಟೀಲ್‌ ಅವರ ಪತ್ರವನ್ನು ಹೊರಗೆ ಬಿಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಈಗ ಎಚ್.ಕೆ.ಪಾಟೀಲ್ ಎಚ್ಚರಗೊಂಡಿದ್ದಾರೆ. 1.5 ಲಕ್ಷ ಕೋಟಿ ರೂ. ಹಗರಣ ಆಗಿದೆ ಎಂದಿದ್ದಾರೆ. ಎರಡು ವರ್ಷದಿಂದ ತಾವು ಕಾನೂನು ಮಂತ್ರಿಯಾಗಿದ್ದರಿ, ಕುಂಭಕರ್ಣನ ನಿದ್ದೆಯಲ್ಲಿ ಇದ್ರಾ? ಎಂದು ಪ್ರಶ್ನಿಸಿದ್ದಾರೆ. ಎಚ್.ಕೆ.ಪಾಟೀಲ್ 10 ವರ್ಷಗಳ ಬಳಿಕ ಪತ್ರ ಬರೆದಿದ್ದಾರೆ. ಗ್ರೇಟ್…ಸಿದ್ದರಾಮಯ್ಯನವರೇ, ಏನು ಮಾಡಿದ್ರೀ ನೀವು ರಾಜ್ಯದ ಸಂಪತ್ತು ಉಳಿಸಲು? ಎಚ್.ಕೆ.ಪಾಟೀಲರೇ ಡ್ರಾಮಾ ಬಿಡಿ. ನಿಮ್ಮ ನೇತೃತ್ವದ ಉಪ ಸಮಿತಿ ಕೊಟ್ಟ ವರದಿ ಇಟ್ಟುಕೊಂಡೇ ಸಿದ್ದರಾಮಯ್ಯ ಏನೂ ಮಾಡಿಲ್ಲ. ಈಗ ಪತ್ರ ಬರೆದು ಏನು ಮಾಡುತ್ತೀರಿ? ಅದನ್ನು ತೆಗೆದು ಕಸದಬುಟ್ಟಿಗೆ ಎಸೆಯಿರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಾನೂನುಬಾಹಿರವಾಗಿ ಏಳು ಗಣಿ ಕಂಪನಿಗಳಿಗೆ ಅನುಮತಿ ನೀಡಿದ್ದರು. ಅಲ್ಲಿ ಏನೆಲ್ಲಾ ನಡೆದಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಪಾಟೀಲರೇ? ಆ ಬಗ್ಗೆ ಮೌನವೇಕೆ? ಯಾವ ನೈತಿಕತೆ ಇಟ್ಟುಕೊಂಡು ಸಿದ್ದರಾಮಯ್ಯ ಪಕ್ಕದಲ್ಲಿ ಕೂತು ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡುತ್ತಿದ್ದೀರಿ ಎಚ್.ಕೆ. ಪಾಟೀಲರೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.

ನಾನು ಸಿದ್ದರಾಮಯ್ಯ ಗಣಿ ಅಕ್ರಮದ ಬಗ್ಗೆ ವಿಧಾನ ಮಂಡಲದಲ್ಲಿಯೂ ಮಾತನಾಡಿದ್ದೇನೆ. ಏಳು ಗಣಿಗಳಿಗೆ ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದಾಗ ಅಕ್ರಮವಾಗಿ ಅನುಮತಿ ನೀಡಿದ್ದಾರೆ. ಎಲ್ಲರ ಬಾಯಿ ಮುಚ್ಚಲು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇಡಿ, ಐಟಿ ಎಂದು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಹಾಗಾದರೆ ಇವರು ಮಾಡುತ್ತಿರುವುದು ಏನು? ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯದ ಜನರು ನನಗೆ ಶಕ್ತಿ ನೀಡಿ ಮುಂದೆ ಐದು ವರ್ಷ ಅಧಿಕಾರ ಕೊಟ್ಟರೆ ಈ ಎಚ್.ಕೆ.ಪಾಟೀಲ್ ಅವರು ಬರೆದ ಪತ್ರಕ್ಕೆ ಉತ್ತರ ಕೊಡುತ್ತೇನೆ. ಎಲ್ಲ ದಾಖಲೆಗಳನ್ನೂ ಇಟ್ಟುಕೊಂಡಿದ್ದೇನೆ. 2012ರಲ್ಲಿ ನನ್ನ ವಿರುದ್ಧ ಹಾಕಲಾದ ಕೇಸ್‌ ಅದು. ನನ್ನಿಂದ ರಾಜ್ಯಕ್ಕೆ ನಯಾಪೈಸೆ ನಷ್ಟವಾಗಿಲ್ಲ. ಇವರು ಕೊಳ್ಳೆ ಹೊಡೆದು ವಿದೇಶಗಳಿಗೆ ಅದಿರು, ಹಣ ಸಾಗಿಸಿದ ಹಾಗೆ ನಾನು ಮಾಡಿಲ್ಲ. ಈಗ ಕಾನೂನು ಸಚಿವರು ಪತ್ರ ಬರೆಯುತ್ತಾರೆ. ಯಾಕೆ ಬರೆದಿದ್ದೀರಿ ಪಾಟೀಲರೇ.. .ನಮ್ಮನ್ನು ಹೆದರಿಸಲಿಕ್ಕಾ? ನಮ್ಮನ್ನು ಹೆದರಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ನೇರವಾಗಿ ಎಚ್.ಕೆ.ಪಾಟೀಲ್‌ ಅವರಿಗೆ ಟಾಂಗ್‌ ಕೊಟ್ಟರು.

ಈ ಸರ್ಕಾರದ ಸಿಎಂ, ಡಿಸಿಎಂ ಇಬ್ಬರಿಂದ ರಾಜ್ಯ ಹಾಳಾಗುತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ ನಿಜಕ್ಕೂ ನೈತಿಕತೆ ಇದ್ದರೆ ಇವರಿಬ್ಬರ ರಾಜೀನಾಮೆ ತೆಗೆದುಕೊಂಡು ಯಾರಾದರೂ ಉತ್ತಮರಾದ ಮೂರನೇ ವ್ಯಕ್ತಿಯನ್ನು ಸಿಎಂ ಮಾಡಿ ರಾಜ್ಯದ ಮರ್ಯಾದೆ ಉಳಿಸಿ‌. ಉಳಿದ ಮೂರು ವರ್ಷವಾದರೂ ಸರಿಯಾಗಿ ಆಡಳಿತ ಮಾಡಿ ಎಂದು ಅವರು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಅಲ್ಪಸಂಖ್ಯಾತರ ಹೆಸರಿನಲ್ಲಿ 625 ಕೋಟಿ ಗೋಲ್‌ ಮಾಲ್: ಎಚ್‌ಡಿಕೆ ಗಂಭೀರ ಆರೋಪ

ಸಾಲಮನ್ನಾ; ನಾನು ಬಿಟ್ಟಿ ಪ್ರಚಾರ ಪಡೆದಿಲ್ಲ

ಕುಮಾರಸ್ವಾಮಿ ಸಾಲಮನ್ನಾ ಮಾಡಿ ಪ್ರಚಾರ ಮಾಡಿಕೊಂಡರು. ನಾನು 300 ಕೋಟಿ ರೂ. ತೀರಿಸಿದೆ ಎಂದು ತುಮಕೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ, 25,000 ಕೋಟಿ ರೂ. ಸಾಲಮನ್ನಾ ಮಾಡಿದ್ದು ಯಾರು? ಸುಖಾಸುಮ್ಮನೆ ಸುಳ್ಳು ಹೇಳುವುದೇಕೆ? ಇಷ್ಟೆಲ್ಲ ಆದ ಮೇಲೆಯೂ ಇವರಿಗೆ ಸಿಎಂ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಇದೆಯಾ? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »