ಬೆಂಗಳೂರು: ನೆಲಮಂಗಲ ಬಳಿ ನಡೆದ ರೋಡ್ ರೇಜ್ (Road Rage) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಗೆ (Ananth Kumar Hegde) ದಾಬಸ್‌ಪೇಟೆ ಪೊಲೀಸರು ನೋಟೀಸ್ (Police notice) ನೀಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಗನ್‌ಮ್ಯಾನ್ ಶ್ರೀಧರ್ ಮತ್ತು ಕಾರು ಚಾಲಕ ಮಹೇಶಗೆ ಷರತ್ತುಬದ್ಧ ಜಾಮೀನು (bail) ನೀಡಲಾಗಿದೆ. ನೆಲಮಂಗಲ JMFC ನ್ಯಾಯಾಲಯದಿಂದ ಇಬ್ಬರಿಗೂ ಜಮೀನು ನೀಡಿ ಆದೇಶ ಹೊರಡಿಸಲಾಗಿದೆ.
ಪ್ರಕರಣದ ನಡೆದ ಬಳಿಕ ಅನಂತ್‌ಕುಮಾರ್ ಹೆಗಡೆ ಅವರನ್ನು ಪೊಲೀಸರು ಒಂದು ಸುತ್ತಿನ ವಿಚಾರಣೆ ನಡೆಸಿ ಕಳಿಸಿದ್ದರು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಹೆಗಡೆಗೆ ದಾಬಸ್ ಪೇಟೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಬಿಟ್ಟು ಕಳಿಸಲಾಗಿದೆ ಎಂದು ಸ್ಥಳೀಯರು ಸೇರಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಕಾರುಗಳ ಓವರ್‌ಟೇಕ್ ವಿಚಾರದಲ್ಲಿ ಗಲಾಟೆಯಾಗಿತ್ತು. ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಕಾರು ಚಾಲಕ ಮಹೇಶ್ ಹಾಗೂ ಗನ್‌ಮ್ಯಾನ್ ಶ್ರೀಧರ್ ಮೇಲೆ ಎಫ್ಐಆರ್ ದಾಖಲಾಗಿತ್ತು.
ಅನಂತ್ ಕುಮಾರ್ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್‌ಮ್ಯಾನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೋಂಪುರ ಹೋಬಳಿಯ ಹಾಲೇನಹಳ್ಳಿ ಗ್ರಾಮದ ಸಲ್ಮಾನ್ ಖಾನ್ (30), ಸೈಫ್ ಖಾನ್ (28) ಇಲಿಯಾಸ್ ಖಾನ್ (50), ಗುಲ್ ಷಿರಾ ಉನ್ನೀಸಾ (45) ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Anantkumar Hegde: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗನ್‌ಮ್ಯಾನ್, ಚಾಲಕನಿಂದ ಗೂಂಡಾಗಿರಿ: ದೂರು ದಾಖಲು