ತುಮಕೂರು: ಎತ್ತಿನಹೊಳೆ ಯೋಜನೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಬಳಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಗುರುವಾರ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ʼʼಈ ಯೋಜನೆ ಮೂಲಕ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಇತಿಹಾಸ ಬರೆದಿದ್ದಾರೆ. ಈ ಯೋಜನೆಯನ್ನು ನಾವು ದೇಶಕ್ಕೆ ಮಾದರಿಯಾಗಿ ಪರಿಚಯಿಸಬೇಕು. ಈ ಯೋಜನೆ ಮಾಡಿರುವ ಅಧಿಕಾರಿಗಳು, ತಂತ್ರಜ್ಞರು, ಗುತ್ತಿಗೆದಾರರಿಗೆ ವಿಧಾನಸೌಧದಲ್ಲಿ ಸೂಕ್ತ ರೀತಿಯಲ್ಲಿ ಗೌರವ ನೀಡಲಾಗುವುದುʼ’ ಎಂದು ತಿಳಿಸಿದರು.
ವಿಶ್ವದಲ್ಲೇ ಅತಿ ಎತ್ತರ (40 ಮೀಟರ್) ಏಷ್ಯಾದಲ್ಲೇ ಅತಿ ಉದ್ದದ (10.47 ಕಿ. ಮೀ.) ಮೇಲ್ಗಾಲುವೆ (Acqeduct) ಇದಾಗಿದೆ. ಮಣ್ಣಿನ ಸಾಮರ್ಥ್ಯಕ್ಕೆ ತಕ್ಕಂತೆ ಓಪನ್ ಹಾಗೂ ಪೈಲ್ ವಿನ್ಯಾಸಗಳ ಮೂಲಕ ಅಡಿಪಾಯ ನಿರ್ಮಿಸಲಾಗಿದೆ. ಒಟ್ಟು 40 ಮೀ. ಎತ್ತರದಲ್ಲಿ ಬೃಹತ್ ಮೇಲ್ಗಾಲುವೆ ಮೂಲಕ ನೀರು ಹರಿಯಲಿದೆ.
ವಿಶೇಷ ಮಾದರಿಯ Joint Treatment Methodologyಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪರಿಶೀಲಿಸಿ ಕಾಮಗಾರಿ ಮಾಡಲಾಗಿದೆ. ಅತ್ಯಂತ ಕನಿಷ್ಠ ಅವಧಿಯಲ್ಲಿ ಎತ್ತರ ಮಟ್ಟದಲ್ಲಿ ಮಿತ ಕಾರ್ಮಿಕರ ಬಳಕೆ ಹಾಗೂ ಸುರಕ್ಷತೆಗೆ ಆದ್ಯತೆ ಕೊಟ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Namma Metro: ಇನ್ನು ಮುಂದೆ ನಮ್ಮ ಮೆಟ್ರೋ ಟಿಕೆಟ್ ಈ ಐದು ಆ್ಯಪ್‌ಗಳಲ್ಲೂ ಲಭ್ಯ
ಅಕ್ವಾಡೆಕ್ ಎಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ಈ ಯೋಜನೆಗೆ ಇತ್ತೀಚೆಗೆ ರಾಷ್ಟ್ರಮಟ್ಟದ ISDA ಸಂಸ್ಥೆ ನೀಡುವ INFRACON NATIONAL AWARD -IINA-2025 ಪ್ರಶಸ್ತಿ ಲಭಿಸಿದೆ.