ಜೈಪುರ್: ಗುಜರಾತ್ ಹೈಕೋರ್ಟ್‌ನಲ್ಲಿ ನಡೆದ ವರ್ಚುವಲ್ ವಿಚಾರಣೆಯ ವೇಳೆ ಕಕ್ಷಿದಾರನೊಬ್ಬ ಶೌಚಾಲಯದಿಂದ ವಿಚಾರಣೆಗೆ ಹಾಜರಾಗುತ್ತಿರುವುದು ಕಂಡುಬಂದಿದೆ. ಈ ಘಟನೆ ಜೂನ್ 20 ರಂದು ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಅವರ ಪೀಠದ ಮುಂದೆ ನಡೆದಿದ್ದು, ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಈ ವಿಡಿಯೊದಲ್ಲಿ ‘ಸಮದ್ ಬ್ಯಾಟರಿ’ ಎಂಬಾತ ಟಾಯ್ಲೆಟ್‌ನಲ್ಲಿ ಕುಳಿತಿರುವುದು ಸೆರೆಯಾಗಿದೆ. ನಂತರ ಆತ ಹೋಗಿ ಬೇರೆ ಕೋಣೆಯಲ್ಲಿ ಕುಳಿತಿದಿದ್ದಾನೆ.ಈ ಘಟನೆಯು ವರ್ಚುವಲ್ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸೂಕ್ತ ನಡವಳಿಕೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಆ ವ್ಯಕ್ತಿಯು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸುವ ಪ್ರಕರಣದಲ್ಲಿ ಪ್ರತಿವಾದಿಯಾಗಿ ಹಾಜರಿದ್ದನು. ವಾಸ್ತವವಾಗಿ, ಅವನು ಪ್ರಕರಣದ ಮೂಲ ದೂರುದಾರನಾಗಿದ್ದನು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರು ಆ ವ್ಯಕ್ತಿಯ ದುರ್ನಡತೆ ಕಂಡು ಕಿಡಿಕಾರಿದ್ದಾರೆ. ವಕೀಲರಿಗೆ ಮಾತ್ರ ವಿಸಿ ಮಾಡಲು ಅವಕಾಶ ನೀಡಬೇಕು. ಒಬ್ಬ ಕಕ್ಷಿದಾರನ ಈ ನಡವಳಿಕೆ ತಪ್ಪು. ಇಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒಬ್ಬರು ಬರೆದಿದ್ದಾರೆ.
ವರ್ಚುವಲ್ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಗೌರವಕ್ಕೆ ಧಕ್ಕೆಯಾಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ, ಗುಜರಾತ್ ಹೈಕೋರ್ಟ್ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಮೊಕದ್ದಮೆದಾರನಿಗೆ ದಂಡ ವಿಧಿಸಿತ್ತು. ಆತ ಸಿಗರೇಟ್ ಸೇದುತ್ತಾ ವಿಡಿಯೊ ಮೂಲಕ ಕಾಣಿಸಿಕೊಂಡಿದ್ದ. ಹೀಗಾಗಿ ಗುಜರಾತ್ ಹೈಕೋರ್ಟ್ ಆತನಿಗೆ ರೂ. 50,000 ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.