Karunadu Studio

ಕರ್ನಾಟಕ

Pralhad Joshi: ಕಾಂಗ್ರೆಸ್‌ನಲ್ಲಿ ಮನಮೋಹನ್‌ ಸಿಂಗ್‌, ಖರ್ಗೆ ಸ್ಥಿತಿ ಒಂದೇ: ಪ್ರಲ್ಹಾದ್‌ ಜೋಶಿ – Kannada News | union minister Pralhad Joshi talks about Mallikarjuna Kharge


ಹುಬ್ಬಳ್ಳಿ: ನಾಮ್‌ಕೇವಾಸ್ತೆ ಎನ್ನುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್‌ ಅಧಿಕಾರ ನೀಡಿದ್ದು, ತನ್ನ ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಸೋಮವಾರ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದರೂ ಖರ್ಗೆ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಹೆಸರಿಗಷ್ಟೇ ಅಧಿಕಾರ ನೀಡಿದೆ. ಹಿಂದೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಈಗ ಖರ್ಗೆ ಅವರ ಪರಿಸ್ಥಿತಿ ಒಂದೇ ಆಗಿದೆ ಎಂದು ಟೀಕಿಸಿದರು.

ʼರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ಕೈಯಲ್ಲಿ‌ದೆ. ನಮಗೇನೂ‌ ಗೊತ್ತಾಗೋದಿಲ್ಲʼ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಪಕ್ಷ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ನಿದರ್ಶನ ಮತ್ತು ಕಾಂಗ್ರೆಸ್‌ನಲ್ಲಿ ಹಿರಿಯ ರಾಜಕಾರಣಿಗಳಿಗೆ ಬೆಲೆಯಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಸರಿಗೆ ಮಾತ್ರ ಎಐಸಿಸಿ ಅಧ್ಯಕ್ಷ ಸ್ಥಾನದಂತಹ ಹುದ್ದೆ ನೀಡಿದೆ. ಆದರೆ, ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಹ ಅಧಿಕಾರ ‌ನೀಡದೇ ಅವರನ್ನು ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಅಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಇಂದು ಮಲ್ಲಿಕಾರ್ಜುನ ಖರ್ಗೆ ಇಬ್ಬರ ಸ್ಥಿತಿಯೂ ಒಂದೇ ಆಗಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ಕಾಂಗ್ರೆಸ್‌ನ ಡಿಎನ್‌ಎ

ಭ್ರಷ್ಟಾಚಾರ ಅನ್ನೋದು ಕಾಂಗ್ರೆಸ್‌ನ ಡಿಎನ್‌ಎದಲ್ಲೇ ಇದೆ. ಕಾಂಗ್ರೆಸ್‌ ಹೈಕಮಾಂಡ್ ಪರಿವಾರವೇ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ನಾಯಕರು ಕಲ್ಲಿದ್ದಲು ಗಣಿ ಹಗರಣದಲ್ಲಿ ಜೈಲ್‌ ಕಂಡು ಬಂದಿದ್ದಾರೆ. ಅವರ ಸರ್ಕಾರದಲ್ಲಿ ನಡೆದಷ್ಟು ಹಗರಣಗಳು ಎಂದೆಂದೂ ನಡೆದಿಲ್ಲ ಎಂದು ಜೋಶಿ ಆರೋಪಿಸಿದರು.

ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಸೇರಿದಂತೆ ಯಾವುದೇ ಗಣಿಗಳನ್ನು ಬೇಕಾಬಿಟ್ಟಿ ಹಂಚುತ್ತಿದ್ದರು. ಆದರೆ ಎನ್‌ಡಿಎ ಸರ್ಕಾರ ಬಂದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ-ಸೂಚನೆಯಂತೆ ಗಣಿ ಹಂಚಿಕೆಯನ್ನು ಅತ್ಯಂತ ಪಾರದರ್ಶಕಗೊಳಿಸಿದ್ದೇವೆ. ಪ್ರಧಾನಿ, ರಾಷ್ಟ್ರಪತಿಯೂ ಇದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಅಷ್ಟರ ಮಟ್ಟಿಗೆ ಎಲ್ಲದನ್ನೂ ಆನ್‌ಲೈನ್‌ ವ್ಯಾಪ್ತಿಗೆ ತಂದಿದ್ದೇವೆ ಎಂದು ಹೇಳಿದರು.

ಇವರ ಆಡಳಿತದಲ್ಲಿ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಏನೇನಾಗಿದೆ? ಎಂಬುದು ಜಗತ್ತಿಗೇ ಗೊತ್ತಿದೆ. ಇವರ ಸರ್ಕಾರ ಇದ್ದಾಗಲೇ ಕಲ್ಲಿದ್ದಲು ಹಗರಣ ನಡೆದಿದ್ದು, ಕೇಸ್‌ ಆಗಿರುವುದೂ ಆಗಲೇ ಹೊರತು ನಮ್ಮ ಸರ್ಕಾರ ಬಂದ ಮೇಲಲ್ಲ ಎಂದ ಸಚಿವರು, ದೇಶದಲ್ಲಿ ಇಂದು ವಿದ್ಯುತ್‌ ಉತ್ಪಾದನೆಗೆ ಹೂಡಿಕೆ ಮಾಡಿದ ದೇಶ-ವಿದೇಶದವರೆಲ್ಲ ಖುಷಿ ಪಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಪಾರದರ್ಶಕತೆ ಕಾಪಾಡಿದ್ದೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ತಿಂಗಳು ಒಂದನೇ ತಾರೀಖಿಗೇ ಗ್ಯಾರೆಂಟಿ ಹಣ ಜಮಾ ಎಂದಿದ್ದು. 200‌ ಯುನಿಟ್‌ ವಿದ್ಯುತ್ ʼನಂಗೂ ಫ್ರೀ ನಿಂಗೂ ಫ್ರೀʼ ಎಂದಿದ್ದರು. ಈಗೇನಾಗಿದೆ? ಹೇಳಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಚಾಟಿ ಬೀಸಿದರು.

ಈ ಸುದ್ದಿಯನ್ನೂ ಓದಿ | 2nd PUC Exam 3 result 2025: ನಾಳೆ ಮಧ್ಯಾಹ್ನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಬಿಡುಗಡೆ

ಸುರ್ಜೇವಾಲಾ ತೇಪೆ ಹಚ್ಚಲು ಬಂದಿದ್ದಾರೆ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರವನ್ನು ಅವರ ಶಾಸಕರೇ ತೆರೆದಿಟ್ಟಿದ್ದಾರೆ. ಅವೈಜ್ಞಾನಿಕ ಗ್ರಾರೆಂಟಿಗಳಿಂದಾಗಿ ಚರಂಡಿ ಹೂಳೆತ್ತಲೂ ಹಣವಿಲ್ಲ ಎಂದಿದ್ದಾರೆ. ʼರಾಜ್ಯದ ಅಭಿವೃದ್ಧಿಗೆ ಸಿದ್ದರಾಮಣ್ಣನ ಬಳಿ ಹಣವಿಲ್ಲ ಕೇಂದ್ರವನ್ನು ಕೇಳಿʼ ಎಂದು ಸ್ವತಃ ಗೃಹ ಸಚಿವ ಪರಮೇಶ್ವರ್‌ ಅವರೇ ಹೇಳಿದ್ದಾರೆ. ಒಬ್ಬೊಬ್ಬರೇ ಕಾಂಗ್ರೆಸ್‌ ಶಾಸಕರು ಆಡಳಿತದ ವಿರುದ್ಧ ಸಿಡಿದೇಳುತ್ತಿದ್ದಾರೆ. ಹೀಗಾಗಿ ಸುರ್ಜೇವಾಲಾ ಶಾಸಕರ ಅಸಮಾಧಾನಕ್ಕೆ ತೇಪೆ ಹಚ್ಚಲು ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »